ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ನದಿಯ ಜಲಮೂಲದಿಂದ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ನಿರಂತರ ಮತ್ತು ಶಾಶ್ವತ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ಕುಡಿಯುವ ನೀರಿನ ಎರಡು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಯೋಜನೆಗಳ ಅನುಮೋದನೆಯೊಂದಿಗೆ ತಾಲೂಕಿನ ಕುಡಿಯುವ ನೀರು ವಿತರಣೆ ವ್ಯವಸ್ಥೆಗೆ ಮತ್ತಷ್ಟು ಬಲ ಬರಲಿದೆ ಎಂದರು.
ದಡ್ಡಿ ಹಾಗೂ ಇತರೆ 120 ಜನವಸತಿಗಳ ಸಂಯುಕ್ತ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೆ ₹285 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ₹92 ಕೋಟಿ ವೆಚ್ಚದ ಪಾಶ್ಚಾಪುರ ಹಾಗೂ ಇತರೆ 27 ಜನವಸತಿಗಳು ಹಾಗೂ ಗೋಕಾಕ ತಾಲೂಕಿನ ಕುಂದರಗಿ ಹಾಗೂ 25 ಜನವಸತಿಗಳ ಸಂಯುಕ್ತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರ ಸಹಭಾಗಿತ್ವದಲ್ಲಿ ಅನುಮೋದಿತ ಜಲಜೀವನ ಮಿಷನ್ ಯೋಜನೆ(ಜೆಜೆಎಂ)ಯಡಿ ಸಿದ್ಧಪಡಿಸಿದ ಈ ಎರಡು ಯೋಜನೆಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಇದರಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಅಲ್ಲದೇ ಕೊಳವೆಬಾವಿ ಅವಲಂಬಿತ ಪ್ರದೇಶಗಳಿಗೆ ನೀರಿನ ಅಭಾವವೂ ತಪ್ಪಲಿದೆ. ಜತೆಗೆ ಭವಿಷ್ಯದ ಬೇಸಿಗೆ ದಿನಗಳಲ್ಲಿ ಎದುರಾಗಲಿರುವ ಜಲದಾಹ ತಣಿಸುವ ಆಶಾಭಾವ ಮೂಡಿಸಿದೆ ಎಂದು ಅವರು ಹೇಳಿದರು.
ನಿರಂತರ, ಶಾಶ್ವತ ಹಾಗೂ ಸರಾಗವಾಗಿ ಕುಡಿಯುವ ನೀರು ಪೂರೈಸಲು ಹಿಡಕಲ್ ಡ್ಯಾಮ್ ಬಳಿ ಘಟಪ್ರಭಾ ನದಿಯಿಂದ ನೀರೆತ್ತುವ ಮೂಲಕ ಈ ಎರಡು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆ ಅನುಮೋದನೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ ಮಹತ್ವದ ಪಾತ್ರ ವಹಿಸಿ, ಜನರ ಸಮಸ್ಯೆಗೆ ಧ್ವನಿಯಾಗಿದ್ದಾರೆ. ಜತೆಗೆ ದಿ.ಉಮೇಶ ಕತ್ತಿ ಅವರ ಕನಸಿನ ಯೋಜನೆಗಳಲ್ಲಿ ಇವು ಕೂಡ ಪ್ರಮುಖವಾಗಿವೆ ಎಂದು ಅವರು ಹೇಳಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ವಿಜಯ ಮಿಶ್ರಿಕೋಟಿ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಸಹಾಯಕ ಎಂಜಿನಿಯರ್ ಬಿ.ಡಿ.ನಾಯಿಕವಾಡಿ, ಚೇತನ ಕಡಕೋಳ, ಸಂತೋಷ ಪಾಟೀಲ, ವಿಕಾಸ ಸವನೂರೆ, ವಿದ್ಯುತ್ ಸಹಕಾರಿ ಸಂಘದ ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ, ಮುಖಂಡರಾದ ರಾಚಯ್ಯ ಹಿರೇಮಠ, ಶೀತಲ್ ಬ್ಯಾಳಿ ಮತ್ತಿತರರು ಇದ್ದರು.