ಸಾರಾಂಶ
ಸೋಮನಾಥನಗರ 3ನೇ ಬ್ಲಾಕ್ ನಲ್ಲಿರುವ ಶ್ರೀ ಗುರುರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ,
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ನಗರದ ವಿವಿಧೆಡೆ ಇರುವ ಶ್ರೀರಾಘವೇಂದ್ರ ಮಠಗಳಲ್ಲಿ ಮಂಗಳವಾರದಿಂದ ಆರಂಭವಾಯಿತು.ನಗರದ ನಾರಾಯಣಶಾಸ್ತ್ರಿ ರಸ್ತೆ ಸುಬ್ಬರಾಯನಕೆರೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನಾ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ ಜರುಗಿತು.
ಸಂಜೆ ನಡೆದ ಸನ್ಮಾನ ಸಮಾರಂಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಆಯಿಷ್ ನಿರ್ದೇಶಕಿ ಡಾ. ಪುಷ್ಪಾವತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮೊದಲಾದವರು ಪಾಲ್ಗೊಂಡಿದ್ದರು. ನಂತರ ಆಶಿಕಾ ಮತ್ತು ಹರಿಹರನ್ ಅವರಿಂದ ಭರತನಾಟ್ಯ, ಕಥಕ್ ನೃತ್ಯ ಪ್ರದರ್ಶಿಸಿದರು.ಸೋಮನಾಥನಗರ 3ನೇ ಬ್ಲಾಕ್ ನಲ್ಲಿರುವ ಶ್ರೀ ಗುರುರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ, ಆದ್ಯ ಗೋವಿಂದಾಚಾರ್ಯ ಅವರಿಂದ ಉಪನ್ಯಾಸ, ವಿಶ್ವನಾಥ ನಾಕೋಡ ಅವರಿಂದ ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು.
ಹಾಗೆಯೇ, ಕೃಷ್ಣಮೂರ್ತಿಪುರಂನ ಶ್ರೀ ರಾಘವೇಂದ್ರ ಸ್ವಾಮಿ ಮಠದ ತತ್ವಜ್ಞಾನ ಮಂದಿರದಲ್ಲಿ ಆರಾಧನಾ ಮಹೋತ್ಸವ ಅಂಗವಾಗಿ ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ ಅವರು ವೀಣಾ ವಾದನ ಪ್ರಸ್ತುಪಡಿಸಿದರು.ಜಯಲಕ್ಷ್ಮೀಪುರಂನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಲ್ಲಿ ವಿಶೇಷ ಪೂಜೆ, ಸಮೀರಾಚಾರ್ಯ ಅವರಿಂದ ಗಾಯನವಿತ್ತು. ಕುವೆಂಪುನಗರ ನವಿಲು ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ, ಭಜನೆ ಜರುಗಿತು.
ಕೃಷ್ಣಮೂರ್ತಿಪುರಂ ರಾಮಯ್ಯರ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸೇರಿದಂತೆ ವಿವಿಧೆಡೆ ಆರಾಧನ ಮಹೋತ್ಸವ ಅಂಗವಾಗಿ ಭಕ್ತರು ರಾಯರ ದರ್ಶನ ಪಡೆದರು.