ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಿ
ಕನ್ನಡಪ್ರಭ ವಾರ್ತೆ ಮೈಸೂರುಅಂಕಗಳು ಬೇಕು. ಆದರೆ ಜೀವನವೇ ಅಂಕಗಳಲ್ಲ, ಬೇರೆ ಜೀವನವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹಾಸ್ಯ ಭಾಷಣಕಾರ್ತಿ ಸುಧಾ ಬರಗೂರು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಮೈಸೂರು- ಹುಣಸೂರು ರಸ್ತೆಯ ಮನುಗನಹಳ್ಳಿಯ ಆರಾಧನ ಇನ್ನೋವೇಟಿವ್ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಆರಾಧನೋತ್ಸವ - 2025-26ದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಿ, ಶೇ.35 ಅಂಕಗಳೊಂದಿಗೆ ಪಾಸಾದ ನಾನು 16 ವರ್ಷ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೇನೆ. ನಂತರ ರಾಜೀನಾಮೆ ನೀಡಿ, ಕನ್ನಡದಿಂದಾಗಿ 23 ದೇಶಗಳನ್ನು ಸುತ್ತಿ ಬಂದಿದ್ದೇನೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮುಖ್ಯ. ಅದಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಎಂದರು.ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ದಾರಿ ಹಿಡಿಯಬಾರದು. ಪಠ್ಯದ ಜೊತೆಗೆ ಸಾಹಿತ್ಯ ಕೃತಿಗಳನ್ನು ಕೂಡ ಓದಬೇಕು ಎಂದರು.ಶಿಕ್ಷಕರು ಸದಾ ಸದಾ ಸಕಾರಾತ್ಮಕವಾಗಿ ಯೋಚಿಸಿ,ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ, ಅವರಲ್ಲಿ ನಂಬಿಕೆ, ವಿಶ್ವಾಸ ಇಡಿ ಎಂದ ಅವರು, ಅದೇ ರೀತಿ ಪೋಷಕರು ಆತಂಕ ಮಾಡಿಕೊಳ್ಳುವುದನ್ನು ಬಿಡಬೇಕು ಎಂದರು. ಮತ್ತೊರ್ವ ಮುಖ್ಯ ಅತಿಥಿ ಮೈಸೂರಿನ ಡಿಡಿಪಿಯು ಎಂ.ಪಿ. ನಾಗಮ್ಮ ಮಾತನಾಡಿ, ಜ್ಞಾನ ಗಳಿಸಿದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಸುಧಾ ಬರಗೂರು, ಚನ್ನಪ್ಪ ಮೊದಲಾದವರು ನಿದರ್ಶನ. ಆದ್ದರಿಂದ ಕೀಳರಿಮೆ ಬಿಡಿ. ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಹವ್ಯಾಸಗಳಲ್ಲೂ ತೊಡಗಿಸಿಕೊಳ್ಳಿ ಎಂದರು.ಗಾಯಕ ಹಾಗೂ ನಟ ಚನ್ನಪ್ಪ ಹುದ್ದಾರ್ ಮಾತನಾಡಿ, ಕನ್ನಡ ನನ್ನ ಹೃದಯ ಭಾಷೆ. ಹೀಗಾಗಿ ನನಗೆ ಕನ್ನಡದ ಮೇಲೆ ಅಪಾರ ಪ್ರೀತಿ ಎಂದರು.ಅಂಬರೀಶ್, ದರ್ಶನ್ ತೂಗುದೀಪ, ಯಶ್ ಮತ್ತಿತರರು ಅಭಿನಯಿಸಿರುವ ಚಿತ್ರದ ಗೀತೆಗಳನ್ನು ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಆರಾಧನ ಕರುನಾಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ಗೌರಮ್ಮ ಜಯರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಮತ್ತು ಪ್ರಾಂಶುಪಾಲ ಜೆ. ಯೋಗಣ್ಣ ಅಧ್ಯಕ್ಷತೆ ವಹಿಸಿದ್ದರು. ಸುಷ್ಮಾ ಯೋಗಣ್ಣ, ಸತ್ಯಣ್ಣ ಇದ್ದರು.ಕನ್ನಡ ಉಪನ್ಯಾಸಕ ಕೇಶವ್ ಬಳ್ಳೆಕೆರೆ, ನಾಗೇಶ್ ನೇತೃತ್ವದ ಉಪನ್ಯಾಸಕರ ತಂಡ ಪ್ರಾರ್ಥಿಸಿದರು. ಕೇಶವ್ ಸ್ವಾಗತಿಸಿದರು ಸೌಮ್ಯಾ, ನಯನಾ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಮಮತಾ ವಾರ್ಷಿಕ ವರದಿ ಓದಿದರು. ಬಾಕ್ಸ್...ಸುಧಾ ಬರಗೂರು ಹಾಸ್ಯ, ಚನ್ನಪ್ಪ ಗಾಯನದ ಮೋಡಿ...ಹಾಸ್ಯ ಭಾಷಣಕಾರ್ತಿ ಸುಧಾ ಬರಗೂರು ಅವರ ಹಾಸ್ಯ, ಚಲನಚಿತ್ರ ನಟ ಹಾಗೂ ಗಾಯಕ ಚನ್ನಪ್ಪ ಹುದ್ದಾರ್ ಅವರು ಗಾಯನದ ಮೂಲಕ ಸಭಿಕರನ್ನು ರಂಜಿಸಿದರು. ಸುಧಾ ಅವರ ಮಾತಿನ ಮೋಡಿಗೆ ಚಪ್ಪಾಳೆ, ಚನ್ನಪ್ಪ ಅವರ ಹಾಡಿನ ಲಯಕ್ಕೆ ಸಿಳ್ಳೆ, ಕೇಕೆಗಳು ಕೇಳಿ ಬಂದವು. ಅಲ್ಲದೇ ವಿದ್ಯಾರ್ಥಿಗಳು ಕೂಡ ಅವರೊಂದಿಗೆ ಹಾಡಿ, ಸಂಭ್ರಮಿಸಿದರು.