ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಸರ್ಕಾರಿ ಅಧಿಕಾರಿಗಳ ನೈತಿಕತೆಯನ್ನೇ ಕುಂದಿಸುವಂತೆ ಕಚೇರಿಗೆ ನುಗ್ಗಿ ಸಾರ್ವಜನಿಕರ ಎದುರಿನಲ್ಲಿ ಅವರ ವಿರುದ್ದ ಪ್ರತಿಭಟನೆ ನಡೆಸುವುದು ಶಾಸಕ ಸ್ಥಾನದ ದುರುಪಯೋಗವಾಗಿದೆ. ಈ ಬಗ್ಗೆ ಶಾಸಕರ ವಿರುದ್ದ ದೂರು ದಾಖಲಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಸರ್ಕಾರಿ ಅಧಿಕಾರಿಗಳ ನೈತಿಕತೆಯನ್ನೇ ಕುಂದಿಸುವಂತೆ ಕಚೇರಿಗೆ ನುಗ್ಗಿ ಸಾರ್ವಜನಿಕರ ಎದುರಿನಲ್ಲಿ ಅವರ ವಿರುದ್ದ ಪ್ರತಿಭಟನೆ ನಡೆಸುವುದು ಶಾಸಕ ಸ್ಥಾನದ ದುರುಪಯೋಗವಾಗಿದೆ. ಈ ಬಗ್ಗೆ ಶಾಸಕರ ವಿರುದ್ದ ದೂರು ದಾಖಲಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಶಾಸಕ ಆರಗ ಜ್ಞಾನೇಂದ್ರ ಇತ್ತೀಚೆಗೆ ತಮ್ಮ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿರುವುದು ಕಾನೂನು ಬಾಹಿರವಾಗಿದೆ. ತಾಲೂಕು ಕಚೇರಿಯಲ್ಲಿ ಬಿಜೆಪಿ ಪಕ್ಷದವರೇ ಅತೀ ಹೆಚ್ಚು ಮಧ್ಯವರ್ತಿಗಳಾಗಿದ್ದಾರೆ. ಮತ್ತು ಮರಳು ದಂಧೆ ಸೇರಿದಂತೆ ತಾಲೂಕಿನಲ್ಲಿ ನಡೆಯುವ ಎಲ್ಲ ಅಕ್ರಮಗಳೂ ಶಾಸಕರ ರಕ್ಷಣೆಯಲ್ಲೇ ನಡೆದಿದೆ ಎಂದು ಬುಧವಾರ ಪಟ್ಟಣದ ಪಕ್ಷದ ಕಚೇರಿ ಗಾಂಧಿಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ಎಳ್ಳಮಾವಾಸ್ಯೆ ಜಾತ್ರೆ ಸಮೀಪಿಸುವ ಹಂತದಲ್ಲಿ ಕ್ಷೇತ್ರದ ಶಾಸಕರಾಗಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ರಥದ ಚಕ್ರದ ನಿರ್ಮಾಣದ ಬಗ್ಗೆ ಕನಿಷ್ಠ ಕಾಳಜಿ ವಹಿಸಿಲ್ಲ. ಈ ವಿಚಾರದಲ್ಲಿ ಖ್ಯಾತೆ ತೆಗೆದಿದ್ದ ಶಾಸಕರು ಕೊನೆ ಗಳಿಗೆಯವರೆಗೂ ಚಕ್ರದ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಅಮೇರಿಕಾದಲ್ಲಿದ್ದ ನಾನು ಬಂದ ನಂತರದಲ್ಲಿ ವೈಯಕ್ತಿಕವಾಗಿ 2.50 ಲಕ್ಷ ರು. ವೆಚ್ಚದಲ್ಲಿ ಚಕ್ರ ನಿರ್ಮಾಣ ಮಾಡಿಸಿದ್ದೇನೆ. ಇವರಿಗೆ ಇದರ ಹೊಣೆಗಾರಿಕೆ ಇಲ್ಲವೇ ಎಂದು ಪ್ರಶ್ನಿಸಿದರು.

ಮಹಾತ್ಮಗಾಂಧಿಯವರ ಹೆಸರನ್ನು ಮರೆಯಾಗಿಸುವ ಮತ್ತು ಗ್ರಾಮೀಣ ಭಾಗದ ಬಡವರನ್ನು ವಂಚಿಸುವ ಉದ್ದೇಶದಿಂದಲೇ ನರೇಗಾ ಯೋಜನೆ ಹೆಸರು ಬದಲಿಸಿ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಜಾತಿಧರ್ಮದ ಹೆಸರಿನಲ್ಲಿ ಜನರನ್ನು ಹಾದಿ ತಪ್ಪಿಸುವ ಬಿಜೆಪಿ ಪಕ್ಷದ ಆಡಳಿತ ದೇಶಕ್ಕೆ ಮಾರಕವಾಗಿದೆ. ಪ್ರದಾನಮಂತ್ರಿಯಾಗಿ ನರೇಂದ್ರ ಮೋದಿ ಈವರೆಗೆ ಒಂದೇ ಒಂದು ಸುದ್ದಿಗೋಷ್ಠಿ ನಡೆಸದೇ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಟೀಕಿಸಿದರು.

ಜನಪರ ಕಾಳಜಿ ಮೂಲಕ ದೇಶದಲ್ಲೇ ಉತ್ತಮ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಸಾಧನೆ ಮೂಲಕ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಆಡಳಿತದಲ್ಲಿ ಹಸಿವು, ಸಾಕ್ಷರತೆ, ಉದ್ಯೋಗ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ. ಇದರಿಂದಾಗಿ ರಾಜ್ಯದ ಜನರ ತಲಾದಾಯ ಕೂಡಾ ಏರಿಕೆಯಾಗಿದೆ. ಮತ್ತು ಹೊರರಾಜ್ಯಗಳ ಜನರು ಕರ್ನಾಟಕವನ್ನು ಬಯಸಿ ಬರುತ್ತಿದ್ದಾರೆ ಎಂದರು.

ಗುಡ್ಡೆಕೊಪ್ಪ ಗ್ರಾಪಂ ಅಧ್ಯಕ್ಷ ಸೇರಿದಂತೆ ಪಕ್ಷ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಮೂವರು ಬಿಜೆಪಿ ಮತ್ತು ಓರ್ವ ಜೆಡಿಎಸ್ ಸೇರಿ ನಾಲ್ಕು ಮಂದಿ ಗ್ರಾಪಂ ಸದಸ್ಯರನ್ನು ಪಕ್ಷಕ್ಕೆ ಆಹ್ವಾನಿಸಲಾಯಿತು.

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಕ್ಷದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವಕಾಂಗ್ರೆಸ್ ಅಧ್ಯಕ್ಷ ರವೀಶ್, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾರಮೇಶ್, ಪ್ರಮುಖರಾದ ಕಟ್ಟೆಹಕ್ಕಲು ಕಿರಣ್, ಪದ್ಮನಾಬ್, ಅಮರನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಕೇಳೂರು ಮಿತ್ರಾ, ಶಬನಂ ಮುಂತಾದವರು ಇದ್ದರು.