ಅರಸೀಕೆರೆ ಕ್ರೀಡಾಂಗಣದ ಗೋಳು, ಕೇಳುವವರಾರು?

| Published : Feb 09 2024, 01:52 AM IST

ಸಾರಾಂಶ

ತಾಲೂಕಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರಿರುವ ಕ್ರೀಡಾಪಟುಗಳು ಇದ್ದಾರೆ, ಉದಯೋನ್ಮುಖ ಕ್ರೀಡಾಪಟುಗಳು ಅಭ್ಯಾಸ ಮಾಡಲು ಸೂಕ್ತ ಸೌಲಭ್ಯವಿಲ್ಲದೆ ಕ್ರೀಡೆಗಳಿಂದ ಹೊರಗುಳಿಯುವಂತಾಗಿದೆ. ಕನಿಷ್ಠ ಶೌಚಾಲಯಕ್ಕೂ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದಲ್ಲಿ ಕ್ರೀಡಾಂಗಣವಿದೆ. ಆದರೆ ಯಾವುದೇ ಸೌಲಭ್ಯಗಳಿಲ್ಲ. ಈ ಹಿಂದೆ ಸರಕಾರ ನೀಡಿದ ಜಿಮ್ ಉಪಕರಣಗಳು ಟೌನ್ ಕ್ಲಬ್ ಒಳಗೆ ವಿಶ್ರಾಂತಿ ಪಡೆಯುತ್ತಿವೆ. ಏನೆಲ್ಲಾ ಸಾಧನೆ ಮಾಡುವ ನಮ್ಮ ಶಾಸಕರಿಗೆ ಕ್ರೀಡಾಂಗಣದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲವಾಗಿದೆ. ಇದರಿಂದ ಕ್ರೀಡಾಪಟುಗಳ ಉತ್ಸಾಹವೂ ಕಮರಿ ಹೋಗುತ್ತಿದೆ.

ತಾಲೂಕಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರಿರುವ ಕ್ರೀಡಾಪಟುಗಳು ಇದ್ದಾರೆ, ಉದಯೋನ್ಮುಖ ಕ್ರೀಡಾಪಟುಗಳು ಅಭ್ಯಾಸ ಮಾಡಲು ಸೂಕ್ತ ಸೌಲಭ್ಯವಿಲ್ಲದೆ ಕ್ರೀಡೆಗಳಿಂದ ಹೊರಗುಳಿಯುವಂತಾಗಿದೆ. ಕನಿಷ್ಠ ಶೌಚಾಲಯಕ್ಕೂ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ.

ಅಥ್ಲಿಟ್ ಗಳಿಗೆ ಓಡಲು ಟ್ರ್ಯಾಕ್ ಕೂಡ ಇರದಿರುವುದು ಬೇಸರದ ಸಂಗತಿಯೇ. ಕ್ರೀಡಾ ಇಲಾಖೆಗೆ ಸರಕಾರ ಹೆಚ್ಚು ಅನುದಾನ ಕೊಡುತ್ತಿಲ್ಲ ಎಂಬುದನ್ನು ಶಾಸಕರು ಪದೇಪದೇ ಹೇಳುತ್ತಲೇ ಇರುತ್ತಾರೆ. ಶಾಸಕರಿಗೆ ಯಾವುದಾದರೂ ಅನುದಾನದಲ್ಲಿ ಅರಸೀಕೆರೆ ಕ್ರೀಡಾಂಗಣಕ್ಕೆ ಸ್ವಲ್ಪ ಹಣ ತರುವುದೇನೂ ಕಷ್ಟವಲ್ಲ. ಆದರೆ ಕ್ರೀಡಾಂಗಣ ಅಭಿವೃದ್ಧಿಗೊಳಿಸಿದರೆ ಅದು ಮತದಾರರಿಗೆ ಸೌಲಭ್ಯವಾಗುವುದಿಲ್ಲ, ಹೀಗಾಗಿ ಕ್ರೀಡಾಂಗಣದಿಂದ ಯಾವ ಉಪಯೋಗವೂ ಇಲ್ಲ ಎಂಬ ಅಭಿಪ್ರಾಯ ಶಾಸಕರದ್ದು ಎನ್ನುತ್ತಾರೆ ಕ್ರೀಡಾಭಿಮಾನಿಗಳು.

ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಹೋಗಿಬಂದಿರುವ ನೌಕರರು ನಮ್ಮ ತಾಲೂಕಿನಲ್ಲಿದ್ದಾರೆ. ವಿವಿಧ ಆಟೋಟಗಳಿಗೆ ಬೇರೆ ಸ್ಥಳಗಳು ಲಭ್ಯವಿಲ್ಲ, ಹಲವು ಶಾಲೆಗಳಲ್ಲಿ ಆಟದ ಮೈದಾನವಿಲ್ಲ, ಯುವಜನ ಮತ್ತು ಕ್ರೀಡಾ ಇಲಾಖೆ ವರ್ಷಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಕ್ರೀಡೆಗಳನ್ನು ಏರ್ಪಡಿಸಿ ಕೈ ತೊಳೆದುಕೊಳ್ಳುತ್ತಾ ಬಂದಿದೆ. ಯುವಕರಿಗೆ ಸೂಕ್ತ ಕ್ರೀಡಾ ವಾತಾವರಣವನ್ನು ದೊರಕಿಸಿ ಕೊಡುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ ತಾಳಿದ್ದಾರೆ. ಹೀಗಾಗಿ ಕ್ರೀಡಾಪಟುಗಳು ಬೇರೆಡೆ ಹೋಗಿ ಅಭ್ಯಾಸ ಮಾಡುವ ಪರಿಸ್ಥಿತಿ ನಮ್ಮ ಅರಸೀಕೆರೆ ತಾಲೂಕಿಗೆ ಬಂದೊದಗಿದೆ. ಸರಕಾರ ಜಿಮ್ ಉಪಕರಣಗಳನ್ನು ನೀಡಿ ವರ್ಷಗಳೇ ಕಳೆದಿದ್ದರೂ ಸಹ ಅವುಗಳನ್ನು ಟೌನ್ ಕ್ಲಬ್ ನಲ್ಲಿ ಇರಿಸಲಾಗಿದೆ. ಅಲ್ಲಿಗೆ ಸಾರ್ವಜನಿಕರು ಹೋಗುವಂತಿಲ್ಲ, ಸದಸ್ಯತ್ವ ಹೊಂದಿದವರು ಮಾತ್ರ ಹೋಗುತ್ತಾರೆ.

ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿ

ರಾಷ್ಟ್ರೀಯ ಹಬ್ಬಗಳು, ಕ್ರೀಡಾಕೂಟಗಳು ಈ ಕ್ರೀಡಾಂಗಣದಲ್ಲಿಯೇ ನಡೆಯಬೇಕು ಎನ್ನುತ್ತಾರೆ ಶಾಸಕರು. ಸಾವಿರಾರು ಹೆಣ್ಣು ಮಕ್ಕಳು ಅಲ್ಲಿ ಸೇರಿರುತ್ತಾರೆ, ಆದರೆ ಅಲ್ಲಿ ಶೌಚಾಲಯ ಮತ್ತಿತರ ವ್ಯವಸ್ಥೆಗಳೇ ಇಲ್ಲ. ಹೀಗಾಗಿ ಸಮಾರಂಭಗಳಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ, ಈ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲದಾಗಿದೆ. ಕೇವಲ ತಂತಿ ಬೇಲಿ ಹಾಕಿ ಕ್ರೀಡಾಂಗಣಕ್ಕೆ ರಕ್ಷಣೆ ನೀಡಿದರೆ ಸಾಲದು. ಕ್ರೀಡಾಂಗಣದಲ್ಲಿ ಏನೇನು ಸೌಲಭ್ಯಗಳಿರಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳು ಚಿಂತಿಸಬೇಕಿದೆ.ಶಾಸಕರು ಇನ್ನಾದರೂ ಕ್ರೀಡಾಂಗಣಕ್ಕಾಗಿ ವಿಶೇಷ ಅನುದಾನವನ್ನು ತಂದು ಕ್ರೀಡಾಂಗಣದ ಅಭಿವೃದ್ಧಿಗೆ ಮುಂದಾಗಬೇಕೆಂದು ತಾಲೂಕಿನ ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಆಗ್ರಹವಾಗಿದೆ.