ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಿಂದುಳಿದ ವರ್ಗಗಳ ಆಯೋಗ ರಚನೆ ಮುಂತಾದ ಚಾರಿತ್ರಿಕ ಯೋಜನೆಗಳ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಶ್ರೀ ಸಾಮಾನ್ಯ ಜನರ ಬದುಕಿನ ಭರವಸೆಯಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು ಇಂದಿಗೂ ಶಾಶ್ವತರಾಗಿದ್ದು, ಅವರ ಸಾಧನೆಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಿಂದುಳಿದ ವರ್ಗಗಳ ಆಯೋಗ ರಚನೆ ಮುಂತಾದ ಚಾರಿತ್ರಿಕ ಯೋಜನೆಗಳ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಶ್ರೀ ಸಾಮಾನ್ಯ ಜನರ ಬದುಕಿನ ಭರವಸೆಯಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು ಇಂದಿಗೂ ಶಾಶ್ವತರಾಗಿದ್ದು, ಅವರ ಸಾಧನೆಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಹೇಳಿದರು.ಜಿಪಂ, ತಾಪಂ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ಪಟ್ಟಣದ ಗ್ರಾಮೀಣಸೌಧದಲ್ಲಿ ಜರುಗಿದ ಅರಸುರವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು, ಈ ದೇಶದ ರೈತರು ಶ್ರೀ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಅರಸುರವರು ಜಾರಿಗೆ ತಂದಿರುವ ಭೂ ಸುಧಾರಣೆ, ಹಾವನೂರು ವರದಿ ಅನುಷ್ಠಾನ ಮುಂತಾದ ಯೋಜನೆಗಳ ಮೂಲಕ ಹಚ್ಚಿದ ಚಿಂತನೆಯ ಕಿಡಿ ಯುವ ಜನತೆಯ ಮೂಲಕ ಈ ದೇಶದ ಭವಿಷ್ಯವನ್ನು ರೂಪಿಸುವುದಕ್ಕೆ ಕಾರಣವಾಗಬೇಕು ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ಮಾತನಾಡಿ, ಚಾರಿತ್ರಿಕವಾದ ಉಳುವವನೇ ಹೊಲದೊಡೆಯ, ಹಿಂದುಳಿದ ವರ್ಗಗಳ ಕಾಯ್ದೆ ಜಾರಿಯ ಮೂಲಕ ಲಕ್ಷಾಂತರ ಕುಟುಂಬಗಳ ಬದುಕಿಗೆ ಆಸರೆಯಾಗಿರುವ ಅರಸುರವರು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದ್ದಾರೆ. ಅರಸುರವರ ಹೆಸರಿನ ಯೋಜನೆಗಳು ಮೂಲ ಉದ್ದೇಶಗಳಿಗೆ ವಿರುದ್ದವಾಗಿ ಭ್ರಷ್ಟಾಚಾರಗಳಿಗೆ ಕಾರಣವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮಾಜಿ ಪ್ರದಾನಿ ಇಂದಿರಾಗಾಂಧಿಯವರ ಸರ್ಕಾರ ಶೋಷಿತ ವರ್ಗದ ಹಿತರಕ್ಷಣೆಯ ಸಲುವಾಗಿ ಜಾರಿಗೆ ತಂದಿದ್ದ 20 ಅಂಶಗಳ ಕಾರ್ಯಕ್ರಮವನ್ನು ಯಥಾವತ್ತಾಗಿ ಜನತೆಗೆ ತಲುಪಿಸಿದ ಏಕೈಕ ಮುಖ್ಯಮಂತ್ರಿ ಅರಸುರವರು. ಇಂತಹ ಧೀಮಂತ ನಾಯಕನ ರಾಜಕೀಯ ಅಂತ್ಯ ಮಾತ್ರ ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ಈ ದೇಶದಲ್ಲಿ ನೂರಾರು ಮಂದಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ. ಆದರೆ ಜನಪರ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಯಾದ ಅಪರೂಪದ ವ್ಯಕ್ತಿಗಳಲ್ಲಿ ದೇವರಾಜ ಅರಸುರವರು ಒಬ್ಬರು ಎಂದರು.ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ಗಿರೀಶ್ ಆಗಮಿಸಿದ್ದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜ್ ಇದ್ದರು. ಸುರಥಕುಮಾರ್ ನಿರೂಪಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಲಿತ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.