ಸಂವಿಧಾನದಲ್ಲಿನ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆ ಕೇವಲ ವೈಭೋಗಕ್ಕಾಗಿ ಎಂದುಕೊಳ್ಳದೆ, ದೊರೆತ ಅವಧಿಯಲ್ಲಿ ಜನಸಾಮಾನ್ಯರ ಸಂಕಷ್ಟವನ್ನು ಪರಿಹರಿಸಲು ದೊರೆತಿರುವ ಸದವಕಾಶ ಎಂದು ಭಾವಿಸಿ ಜನಪರವಾದ ಹಲವು ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ದಿ.ಡಿ ದೇವರಾಜ ಅರಸುರವರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿದ್ದಾರೆ ಎಂದು ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ ನಾಗರಾಜ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಂವಿಧಾನದಲ್ಲಿನ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆ ಕೇವಲ ವೈಭೋಗಕ್ಕಾಗಿ ಎಂದುಕೊಳ್ಳದೆ, ದೊರೆತ ಅವಧಿಯಲ್ಲಿ ಜನಸಾಮಾನ್ಯರ ಸಂಕಷ್ಟವನ್ನು ಪರಿಹರಿಸಲು ದೊರೆತಿರುವ ಸದವಕಾಶ ಎಂದು ಭಾವಿಸಿ ಜನಪರವಾದ ಹಲವು ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ದಿ.ಡಿ ದೇವರಾಜ ಅರಸುರವರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿದ್ದಾರೆ ಎಂದು ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ ನಾಗರಾಜ ಗೌಡ ತಿಳಿಸಿದರು.

ಗುರುವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಹುದ್ದೆ ಸಂವಿಧಾನದಲ್ಲಿ ಅತ್ಯುನ್ನತ ಸ್ಥಾನ ಹೊಂದಿದ್ದು, ದೊರೆತ ಅವಕಾಶದಲ್ಲಿ ಕುರ್ಚಿಗೆ ಮಾತ್ರ ಸೀಮಿತವಾಗದೆ, ಮಾಡಿದ ಸಾಧನೆಗಳು ಸಾರ್ವಜನಿಕವಾಗಿ ನೆನಪಿರುತ್ತದೆ ಎಂದ ಅವರು, ಭೂ ಸುಧಾರಣೆ ಕಾಯ್ದೆ ಮೂಲಕ ಭೂ ಒಡೆತನದಲ್ಲಿದ್ದ ಮಾಲೀಕರ ಭೂಮಿಗಳನ್ನು ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿ ರಾಜ್ಯದಾದ್ಯಂತ ಅಂದಾಜು 21ಲಕ್ಷ ಎಕರೆ ಜಮೀನನ್ನು 4 ಲಕ್ಷ 85 ಸಾವಿರ ಖೇಣಿದಾರ ರೈತರಿಗೆ ಭೂ ಒಡೆತನದ ಹಕ್ಕು ದೊರಕಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವುಗಳಲ್ಲಿ 14 ಸಾವಿರಕ್ಕೂ ಹೆಚ್ಚಿನ ದಲಿತ ಜನಾಂಗದವರಿಗೆ 1ಲಕ್ಷಕ್ಕೂ ಹೆಚ್ಚು ಎಕರೆ ಜಮೀನುಗಳನ್ನು ಮಂಜೂರುಗೊಳಿಸಿದ್ದಾರೆ ಎಂದರು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ 1915ರಲ್ಲಿ ಜನಿಸಿದ ಅರಸುರವರು ಶ್ರೇಷ್ಟ ಕುಸ್ತಿಪಟುವಾಗಿದ್ದು, 1972 ರಿಂದ 1980ರವರೆಗೆ ಎರಡು ಅವಧಿ ಮುಖ್ಯಮಂತ್ರಿಯಾಗಿ 7ವರ್ಷ 238 ದಿನಗಳ ಕಾಲ ಆಡಳಿತ ನಡೆಸಿದ್ದಾರೆ. ಅವರ ಆದರ್ಶದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಸರಿಗಟ್ಟಿದ ಹಿರಿಮೆ ಹೊಂದಿದ್ದಾರೆ ಎಂದರು.

ಡಿ.ದೇವರಾಜ ಅರಸುರವರ ಬಗ್ಗೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹರಿಹರದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಿವಾನಂದ ಮಾತನಾಡಿ, ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ, ಆದರೆ ಅನ್ನ ಮತ್ತು ವಿದ್ಯೆ ಕೊಟ್ಟವರನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಲ್ಲಿ ದೇಶದ ಚರಿತ್ರೆ ಮತ್ತು ಇತಿಹಾಸಗಳ ಜತೆಗೆ ಮಹಾನ್ ಸಾಧಕರ ಸಾಧನೆಗಳನ್ನ ಅಧ್ಯಯನ ಮಾಡಬೇಕು. ಮಹಾನ್ ಸಾಧಕರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಮುಂಚೂಣಿಯಲ್ಲಿದ್ದು, ಮುಖ್ಯಮಂತ್ರಿಯಾಗುವ ಆರಂಭದಲ್ಲಿ ರಾಜ್ಯದಲ್ಲಿ ಕೇವಲ ಹತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಿದ್ದವು. ಮುಖ್ಯಮಂತ್ರಿಯಾಗಿ ಬಡವರ ದೀನದಲಿತರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ರಾಜ್ಯದೆಲ್ಲೆಡೆ ಸಾವಿರಾರು ವಸತಿ ನಿಲಯಗಳನ್ನು ಆರಂಬಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಿಂದುಳಿದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸ್ಥಾಪಿಸಿ ಅನ್ನ ಮತ್ತು ವಿದ್ಯಾಭ್ಯಾಸ ನೀಡಿದ ಮಹಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮತ್ತು ಸಹಕಾರ ನೀಡಿದ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ, ಜಿ.ಪಂ ಮಾಜಿ ಸದಸ್ಯ ಭದ್ರಾಪುರ ಹಾಲಪ್ಪ, ಟಿಎಪಿಸಿಎಂಸಿ ಮಾಜಿ ಅಧ್ಯಕ್ಷ ಸುಧೀರ್ ಮಾರವಳ್ಳಿ, ತಹಸೀಲ್ದಾರ್ ವಾಣಿ.ಯು, ತಾ.ಪಂ ಇಒ ನಾಗರಾಜ್ ಸಹಿತ ತಾ.ಮಟ್ಟದ ಅಧಿಕಾರಿಗಳು, ನಿಲಯ ಪಾಲಕರು ಮತ್ತು ಮೇಲ್ವಿಚಾರಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.