ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವುದು ಅರವಿಂದ್ ಶಾಲೆಯ ಉದ್ದೇಶ ಎಂದು ಸಂಸ್ಥಾಪಕ ಅಧ್ಯಕ್ಷರಾದ ಎಂ. ಕೆ. ಅಶೋಕ್ ತಿಳಿಸಿದ್ದಾರೆ.ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದ ಬಳಿ ಇರುವ ಅರವಿಂದ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಚಿನ್ನದ ಪದಕವನ್ನು ವಿತರಣೆ ಮಾಡಿ ಮಾತನಾಡಿದರು,
ಶಾಲೆಯ ವತಿಯಿಂದ ಪ್ರಥಮ ಸ್ಥಾನಕ್ಕೆ ನಾಲ್ಕು ಗ್ರಾಂ., ದ್ವಿತೀಯ ಸ್ಥಾನಕ್ಕೆ ಮೂರು ಗ್ರಾಂ., ತೃತೀಯ ಸ್ಥಾನಕ್ಕೆ ಎರಡು ಗ್ರಾಂ ಚಿನ್ನದ ನಾಣ್ಯಗಳನ್ನು ವಿತರಿಸುವ ಕಾರ್ಯ ಮಾಡುತ್ತಿರುವುದು ಮಕ್ಕಳಲ್ಲಿ ಹೆಚ್ಚು ಕ್ರೀಡೆ, ಸಾಹಿತ್ಯ, ಸಂಗೀತ, ಈಜು ಮತ್ತು ಹಲವಾರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಿಸಬೇಕು ಎಂಬ ಉದ್ದೇಶವಾಗಿದೆ. ಕೇವಲ ಅಂಕ ಆಧಾರಿತ ಶಿಕ್ಷಣವನ್ನು ಮಾಡುವುದರ ಜೊತೆಗೆ ಅವರ ಭವಿಷ್ಯವನ್ನು ಉತ್ತಮಗೊಳಿಸಲು ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡಬೇಕಾದ ಕರ್ತವ್ಯ ನಮ್ಮ ಮೇಲಿದೆ. ಅದಕ್ಕಾಗಿ ಹೊಸ ಹೊಸ ಆಯಾಮಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮತ್ತು ಅವರಿಗೆ ವಿಶೇಷ ವಿಚಾರಗಳನ್ನು ತಿಳಿಸುವ ಕೆಲಸವನ್ನು ಅರವಿಂದ್ ಇಂಟರ್ನ್ಯಾಷನಲ್ ಶಾಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್, ಸರ್ಕಾರಿ ಶಾಲೆಗಳು ಕೂಡ ಉತ್ತಮ ಅಂಕವನ್ನು ತರುವ ಪ್ರಯತ್ನ ಮಾಡುತ್ತಿವೆ. ಅಂತಾರಾಷ್ಟ್ರೀಯ ಶಾಲೆಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಪೈಪೋಟಿ ಕೊಡಬೇಕಾದ ಅನಿವಾರ್ಯತೆ ಇದೆ. ಹಲವಾರು ಶಾಲೆಗಳಲ್ಲಿ ಮಕ್ಕಳು ಉತ್ತಮ ಶಿಕ್ಷಣವನ್ನು ಕಲಿಯುತ್ತಿದ್ದಾರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕದ ಜೊತೆಗೆ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸುವ ಮತ್ತು ಉಪಯೋಗಿಸಿ ಸಮರ್ಥರಾಗುವ ಕೆಲಸವನ್ನು ಮಕ್ಕಳಿಗೆ ತುಂಬುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಅರವಿಂದ್ ಇಂಟರ್ನ್ಯಾಷನಲ್ ಶಾಲೆಯಂತಹ ಬೃಹತ್ ಶಾಲೆಯನ್ನು ಸ್ಥಾಪಿಸಿ, ಅದನ್ನು ನಿರ್ವಹಿಸುವುದು ಸಣ್ಣ ವಿಚಾರವಲ್ಲ. ಆ ಕೆಲಸ ಮಾಡಿ ಗ್ರಾಮೀಣ ಮಟ್ಟದ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಅಶೋಕ್ ಅವರಿಗೆ ಅಭಿನಂದಿಸುತ್ತೇನೆ ಎಂದರು,
ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಬಹುದಿನಗಳಿಂದ ಕಲಿತಿದ್ದ ಶಿಬಿರದ ಪ್ರಯೋಜನವನ್ನು ಮನ ಬಿಚ್ಚಿ ಮಾತನಾಡಿದರು. ವೇಷಭೂಷಣ, ನೃತ್ಯ ರೂಪಕ, ಸಂಗೀತ ಹೀಗೆ ಹಲವಾರು ವಿಭಾಗಗಳಲ್ಲಿ ರಂಜಿಸಿದರು.ಜೀ ಕನ್ನಡದ ಕಲಾವಿದರಾದ ಸುಶ್ಮಿತಾ ಜಗ್ಗಪ್ಪ ಸೇರಿದಂತೆ ಅವರ ತಂಡ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ನಕ್ಕು ನಗಿಸುವ ಹಲವಾರು ಹಾಸ್ಯದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.