ಸಾರಾಂಶ
ನಾರಾಯಣ ಗುರುಗಳು ಮೌನಕ್ರಾಂತಿಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಾರಾಯಣ ಗುರು ಅವರ ಸಿದ್ಧಾಂತ ಸರ್ವಕಾಲಿಕವಾದದ್ದು. ಅವರ ಚಿಂತನೆಗಳು ಮುಂದೆಯೂ ಪ್ರಸ್ತುತವಾಗಲಿದೆ ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ ತಿಳಿಸಿದರು.ನಾರಾಯಣ ಧರ್ಮ ಪರಿಪಾಲನಾ ಯೋಗಂ ಶಾಖೆ, ನಾರಾಯಣಗುರು ಮಿಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಜೆಕೆ ಮೈದಾನದ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳು ಮೌನಕ್ರಾಂತಿಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಸಮಾಜ ಪರಿವರ್ತನೆಗೆ ಶ್ರಮಿಸಿದ ಅವರ ಆದರ್ಶವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಜಾತಿಬೇಧ ವಿರೋಧಿಸಿದರು. ಆದರೆ, ವೈದಿಕ ಪರಂಪರೆಯನ್ನು ದೂಷಿಸದೆ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಹಾಗಾಗಿ ಅವರು ಅಗ್ರಮಾನ್ಯ ಸನ್ಯಾಸಿಯಾದರು. ಶೋಷಿತರಿಗೂ ದೇವರ ದರ್ಶನ ಮಾಡಿಸಿದ್ದಾಗಿ ಅವರು ಹೇಳಿದರು.ನಾರಾಯಣ ಗುರುಗಳು ದೇವಾಲಯ ನಿರ್ಮಾಣ ಮಾಡಿ ಜನರನ್ನು ಸಾತ್ವಿಕತೆಯ ಕಡೆಗೆ ಕೊಂಡೊಯ್ದರು. ನಾವು ನಾರಾಯಣ ಗುರುಗಳನ್ನು ಇಂದು ಆರಾಧಿಸುತ್ತಿದ್ದೇವೆ. ಅವರ ಅವರ ತತ್ತ್ವ, ಆದರ್ಶಗಳನ್ನು ನಾವು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದು ಬಹಳ ಮುಖ್ಯ ಎಂದರು.
ವೇದಿಕೆಯಲ್ಲಿ ಎಸ್.ಎನ್.ಡಿ.ಪಿ ಮೈಸೂರು ಶಾಖೆ ಅಧ್ಯಕ್ಷ ಜಿ. ರಾಜೇಂದ್ರನ್, ಪ್ರಧಾನ ಕಾರ್ಯದರ್ಶಿ ಆನಂದ್, ಬ್ರಹ್ಮಶ್ರೀ ನಾರಾಯಣಗುರು ಮಿಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಸುಕುಮಾರನ್, ಉಪಾಧ್ಯಕ್ಷ ಸೂರ್ಯನಾರಾಯಣ್, ಕಾರ್ಯದರ್ಶಿ ಮನೋಜ್ ಕುಮಾರ್, ಎಸ್.ಎನ್.ಡಿ.ಪಿ ಕೊಡಗು ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಬಿಲ್ಲವ ಸಂಘದ ಅಧ್ಯಕ್ಷ ಬಿ.ವಿ. ವೆಂಕಪ್ಪ, ವಿದ್ಯಾಸಾಗರ ಕದಂಬ ಇದ್ದರು.