ಕನಕಗಿರಿ: ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಆಳ್ವಿಕೆಯ ಐತಿಹಾಸಿಕ ಕುರುಹುಗಳುಳ್ಳ ತಾಲೂಕಿನ ಕಲಕೇರಿ ಗ್ರಾಮಕ್ಕೆ ಕಮಲಾಪುರದ ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಆರ್. ಶೇಜೇಶ್ವರ್ ಬುಧವಾರ ಭೇಟಿ ನೀಡಿ ಉತ್ಖನನಕ್ಕೆ ಆಗ್ರಹಿಸಿದ (ಹಾಳೂರು) ಸ್ಥಳವನ್ನು ಪರಿಶೀಲನೆ ನಡೆಸಿದರು.

ಕಲಕೇರಿ ಗ್ರಾಮವು ಶಾತವಾಹನರು, ಚಾಲುಕ್ಯರ, ರಾಷ್ಟ್ರಕೂಟರ ಕಾಲದಿಂದಲೂ ಪ್ರಸಿದ್ಧಿ ಪಡೆದಿದ್ದು, ದೇವಸ್ಥಾನ, ಶಾಸನಗಳು ದೊರೆತಿವೆ. ಅಲ್ಲದೇ, ಟಂಕಸಾಲೆಯನ್ನು ಹೊಂದಿತ್ತು ಎನ್ನಲಾಗಿದೆ. ಇಲ್ಲಿ ಹಲವರಿಗೆ ಚಿನ್ನದ ನಾಣ್ಯಗಳು ಸಿಕ್ಕಿರುವ ಮಾತುಗಳು ಕೇಳಿ ಬಂದಿದ್ದವು. ಈ ಹಾಳೂರಿಗೆ ತನ್ನದೇ ಆದ ಇತಿಹಾಸವಿದ್ದು, ಈಗ ಅವಿತು ಹೋಗಿವೆ. ಇನ್ನಷ್ಟು ಐತಿಹ್ಯ ಹೊರ ಬರಲಿ ಎನ್ನುವ ಕಾರಣಕ್ಕೆ ಸ್ಥಳೀಯರು ಲಕ್ಕುಂಡಿ ಮತ್ತು ತೆಕ್ಕಲಕೋಟೆಯಲ್ಲಿ ಮಾದರಿಯಲ್ಲಿ ಇಲ್ಲಿ ಉತ್ಖನನ ನಡೆಸಬೇಕೆನ್ನುವ ಕೂಗು ಸ್ಥಳೀಯರಿಂದ ಕೇಳಿ ಬಂದಿತ್ತು.

ಈ ಕುರಿತು ''''ಕನ್ನಡಪ್ರಭ'''' ಫೆ. 12ರಂದು "ಕಲಿಕೇರಿ ಉತ್ಖನನಕ್ಕೆ ಸಿಗುತ್ತಾ ಹಸಿರು ನಿಶಾನೆ? " ಎನ್ನುವ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದೇ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಲಿಕೇರಿ ಉತ್ಖನನ ಕುರಿತು ಮಾತನಾಡಿದ್ದರು. ಕಲಿಕೇರಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದಾರೆ. ಹಳೇ ಊರಲ್ಲಿನ ಟಂಕಸಾಲೆಯ ಅಧಿಷ್ಠಾನ, ಆಂಜನೇಯಸ್ವಾಮಿ, ಸುಂಕ್ಲಮ್ಮ, ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದ ಶಾಸನಗಳ ಜಾಗಕ್ಕೆ ತೆರಳಿ ವೀಕ್ಷಿಸಿದರು.

ಹಳೇ ಊರು (ಹಾಳೂರು)ನಲ್ಲಿ ಹುದುಗಿ ಹೋಗಿರುವ ಅಪೂರ್ಣ ದೇವಸ್ಥಾನದ ಅಧಿಷ್ಠಾನದ ಸುತ್ತಲೂ ಸ್ವಚ್ಛಗೊಳಿಸಿ, ಸುಮಾರು ೩ ಎಕರೆ ಜಾಗದಷ್ಟು ತಂತಿಬೇಲಿ ಅಳವಡಿಸಲು ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಂಡು, ಸರ್ಕಾರ ಹಾಗೂ ಮೇಲಧಿಕಾರಿಗಳ ಮಾರ್ಗಸೂಚಿಯಂತೆ ಉತ್ಖನನ ನಡೆಸಲಾಗುವುದು ಎಂದು ಶೇಜೇಶ್ವರ್ ತಾಪಂ ಇಒ ರಾಜಶೇಖರ ಅವರಿಗೆ ತಿಳಿಸಿದರು.

ಸ್ಥಳೀಯರು ಸ್ವಚ್ಛತೆ ಮಾತ್ರವಲ್ಲದೇ, ಅಧಿಷ್ಠಾನದ ಸುತ್ತಲೂ ಉತ್ಖನನ ನಡೆಸುವಂತೆ ಒತ್ತಾಯಿಸಿದಾಗ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಉತ್ಖನನ ಮಾಡುವುದಕ್ಕೆ ಒಪ್ಪಿಗೆ ನೀಡಿ ತಮ್ಮ ಮೇಲ್ವಿಚಾರಣೆಯಲ್ಲಿಯೇ ತಾಪಂ, ಗ್ರಾಪಂನಿಂದ ಉತ್ಖನನ ನಡೆಯಲಿದೆ ಎಂದರು. ಇಲ್ಲಿ ಉತ್ಖನನವಾದರೆ ಮುಂದೆ ಬೇರೆಡೆ ಉತ್ಖನನ ಮಾಡಬೇಕೋ? ಬೇಡವೋ? ಎನ್ನುವುದು ತಿಳಿಯುತ್ತದೆ. ಆಗ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.


ಪುರಾತತ್ವ ಇಲಾಖೆಯ ಸಹಾಯಕ ಮಂಜಾ ನಾಯ್ಕ, ಸಂಶೋಧಕರಾದ ಮಂಜಪ್ಪ, ಪ್ರಾಧ್ಯಾಪಕ ಶರಣಬಸವ ಸ್ಥಳೀಯ ಮುಖಂಡ ಮಂಗಳೇಶ ಇತರರಿದ್ದರು.