ಸಾರಾಂಶ
ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಹಾಗೂ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳನ್ನು ಹೊಣೆ
ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಹಾಗೂ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳನ್ನು ಹೊಣೆ ಮಾಡಿರುವ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗ, ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, 56 ಜನ ಗಾಯಗೊಂಡ ಘಟನೆ ಸಂಬಂಧ ವಿಚಾರಣೆಗೆ ನ್ಯಾ.ಕುನ್ಹಾ ಅವರ ಏಕಸದಸ್ಯ ಆಯೋಗವನ್ನು ಸರ್ಕಾರ ರಚಿಸಿತ್ತು.
ಈ ಆಯೋಗ ನೀಡಿರುವ ವರದಿಯಲ್ಲಿ ಪ್ರಮುಖವಾಗಿ, ಆರ್‌ಸಿಬಿ ಗೆಲುವಿನ ಮರುದಿನವೇ ಕಾರ್ಯಕ್ರಮ ಆಯೋಜಿಸಿ ಲಭ್ಯ ಆಸನಗಳಿಗಿಂತ ಹೆಚ್ಚು ಉಚಿತ ಪಾಸ್ ನೀಡಿದ್ದು ಕೆಎಸ್‌ಸಿಎ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವಕ್ಸ್‌ನಿಂದಾಗಿರುವ ಲೋಪ, ಇದಕ್ಕೆ ಒಪ್ಪಿಗೆ ನೀಡಿದ್ದು ಆರ್‌ಸಿಬಿ ತಪ್ಪು, ಕಾರ್ಯಕ್ರಮಕ್ಕೆ ಎಷ್ಟು ಜನ ಸೇರಬಹುದೆಂದು ಅಂದಾಜಿಸುವಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ, ನಿರೀಕ್ಷೆಗೂ ಮೀರಿ ಅಭಿಮಾನಿಗಳು ಜನರು ಸೇರಿದ್ದನ್ನು ಗಮನಿಸಿದ ಮೇಲಾದರೂ ಸರ್ಕಾರದ ಗಮನಕ್ಕೆ ತಂದು ಕಾರ್ಯಕ್ರಮ ರದ್ದತಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬಹುದಿತ್ತು. ಅದನ್ನೂ ಮಾಡದೆ ಕ್ರೀಡಾಂಗಣದ ಗೇಟುಗಳ ಬಳಿ ಹೆಚ್ಚಿನ ಪೊಲೀಸರ ನಿಯೋಜನೆಯನ್ನೂ ಮಾಡದೆ ನಿರ್ಲಕ್ಷಿಸಿದ್ದು ಘಟನೆಗೆ ಕಾರಣ. ಘಟನೆ ನಂತರ ಆರೋಗ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದಿತ್ತು ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಸೂಕ್ತ ಕ್ರಮಕ್ಕೆ ಶಿಫಾರಸು:
ವರದಿಯಲ್ಲಿ ಮುಖ್ಯವಾಗಿ ವಿಜಯೋತ್ಸವದ ಕೇಂದ್ರ ಬಿಂದು ಆರ್‌ಸಿಬಿ, ಅದನ್ನು ಆಯೋಜಿಸಿದ ಡಿಎನ್‌ಎ, ಅದಕ್ಕೆ ವೇದಿಕೆ ಕಲ್ಪಿಸಿದ ಕೆಎಸ್‌ಸಿಎ ಹಾಗೂ ಭದ್ರತಾ ಉಸ್ತುವಾರಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇವರೆಲ್ಲರೂ ಅಂದಿನ ದುರ್ಘಟನೆಗೆ ಹೊಣೆಗಾರರು ಎಂದು ಹೇಳಿದೆ. ಅಷ್ಟೇ ಅಲ್ಲ, ಅವರೆಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ವಿಜಯೋತ್ಸವ ಕಾರ್ಯಕ್ರಮವನ್ನು ಅತಿ ಕಡಿಮೆ ಅವಧಿಯಲ್ಲಿ ತೀರ್ಮಾನಿಸಲಾಗಿದೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಉಚಿತ ಪ್ರವೇಶದ ಬಗ್ಗೆ ಪೋಸ್ಟ್ ಮಾಡಲಾಗಿತ್ತು. ಪೊಲೀಸರಿಗೂ ವಿಜಯೋತ್ಸವಕ್ಕೆ ಭದ್ರತೆ ಒದಗಿಸುವಂತೆ ಕೇಳಲಾಗಿತ್ತು. ಒಟ್ಟಿನಲ್ಲಿ ಎಲ್ಲದರ ನಿರ್ವಹಣೆಯಲ್ಲಿ ಲೋಪ ಎಸಗಲಾಗಿದೆ. ಅಷ್ಟೇ ಅಲ್ಲ, ಗುಪ್ತದಳ ಇಲಾಖೆಯ ಕರ್ತವ್ಯಲೋಪ ಕೂಡ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಗೆ ತಿಳಿಸಿವೆ.
ಅನುಮತಿಗೆ ಕಾಲಮಿತಿ:
ಅಲ್ಲದೆ, ಇನ್ನು ಮುಂದೆ ರಾಜ್ಯದಲ್ಲಿ ಇಂತಹ ಹೆಚ್ಚಿನ ಜನ ಸೇರುವ ಯಾವುದೇ ಕಾರ್ಯಕ್ರಮವಾಗಲಿ ಸರ್ಕಾರವೇ ಸಮಯಾವಕಾಶ ತೆಗೆದುಕೊಂಡು ಅನುಮತಿ ನೀಡಬೇಕು. ಅನುಮತಿ ನೀಡುವ ಮುನ್ನ ಸೇರಬಹುದಾದ ಜನರ ಅಂದಾಜು, ಪೊಲೀಸ್ ಭದ್ರತೆ, ಸಮರ್ಪಕ ಗುಪ್ತಚರ ಇಲಾಖೆಯ ಮಾಹಿತಿ ಎಲ್ಲವನ್ನು ಪರಿಶೀಲಿಸಿ ಅನುಮತಿ ನೀಡಬೇಕು. ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಲು ಕಾಲಮಿತಿ ನಿಗದಿಪಡಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.