ಆರೆಸ್ಸೆಸ್‌ನವರು ದೇವರಿಗಿಂತಾ ದೊಡ್ಡವರೇ? : ಪ್ರಿಯಾಂಕ್‌

| N/A | Published : Oct 27 2025, 12:15 AM IST / Updated: Oct 27 2025, 05:34 AM IST

Priyank Kharge
ಆರೆಸ್ಸೆಸ್‌ನವರು ದೇವರಿಗಿಂತಾ ದೊಡ್ಡವರೇ? : ಪ್ರಿಯಾಂಕ್‌
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಆಸ್ತಿ, ಆದಾಯಗಳ ಬಗ್ಗೆ ಐಟಿ ಮತ್ತು ಇ.ಡಿ ತನಿಖೆಗೆ ನಾವು ಸಿದ್ಧ. ಕಳೆದ 100 ವರ್ಷಗಳಲ್ಲಿ ಆರ್‌ಎಸ್‌ಎಸ್‌ ದೇಣಿಗೆ, ಆದಾಯ ತೆರಿಗೆ ಪಾವತಿ ಬಗ್ಗೆ ಐಟಿ ಮತ್ತು ಇ.ಡಿ ತನಿಖೆಗೆ ಸಿದ್ಧರಿದ್ದೀರಾ ಎಂದು  ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

 ಬೆಂಗಳೂರು:  ನಮ್ಮ ಆಸ್ತಿ, ಆದಾಯಗಳ ಬಗ್ಗೆ ಐಟಿ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ)ದ ತನಿಖೆಗೆ ನಾವು ಸಿದ್ಧ. ಕಳೆದ 100 ವರ್ಷಗಳಲ್ಲಿ ಆರ್‌ಎಸ್‌ಎಸ್‌ಗೆ ಬಂದಿರುವ ದೇಣಿಗೆ, ಆದಾಯ ಹಾಗೂ ತೆರಿಗೆ ಪಾವತಿ ಬಗ್ಗೆ ಐಟಿ ಮತ್ತು ಇ.ಡಿ ತನಿಖೆಗೆ ಸಿದ್ಧರಿದ್ದೀರಾ ಎಂದು ಗ್ರಾಮೀಣಾ‍ಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

ನಮ್ಮ ಆದಾಯ ಮತ್ತು ನಿಮ್ಮ ಆರ್‌ಎಸ್‌ಎಸ್ ಆದಾಯಗಳ ಮೂಲಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಿಂದ ಆಡಿಟ್‌ ಹಾಗೂ ತನಿಖೆಯಾಗಲಿ. ಅದಕ್ಕೆ ನಾವು ಸಿದ್ಧ, ನಿಮ್ಮ ಆರ್‌ಎಸ್‌ಎಸ್‌ ಸಿದ್ಧವೇ ಎಂದು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

‘ಬಿಜೆಪಿ ನಾಯಕರೇ ಕಳೆದ 50 ವರ್ಷಗಳಲ್ಲಿ ನಾವು ಗಳಿಸಿದ ಆಸ್ತಿ, ಆದಾಯಗಳೆಲ್ಲದರ ವಿವರಗಳೂ ಜನತೆಯ ಮುಂದಿದೆ. ಪ್ರತಿ ಚುನಾವಣೆಯಲ್ಲೂ ಅಫಿಡವಿಟ್‌ ಸಲ್ಲಿಸಿದ್ದೇವೆ. ಜತೆಗೆ ನಮ್ಮ ಆದಾಯಕ್ಕೆ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ ಆರೆಸ್ಸೆಸ್‌ ನೋಂದಾಯಿಸಿಕೊಂಡಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಎನ್‌ಜಿಒ ಎನಿಸಿಕೊಂಡಿದೆ? ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಎಂದಿದ್ದಾರೆ.

ಆರೆಸ್ಸೆಸ್‌ನವರು ದೇವರಿಗಿಂತ ದೊಡ್ಡವರೇ?

ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾವುದೇ ಒಂದು ದೇವಸ್ಥಾನಕ್ಕೆ ಬರುವ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಆರ್‌ಎಸ್‌ಎಸ್‌ ಸಂಘಟನೆ ನೋಂದಣಿ ಆಗುವುದಿಲ್ಲ, ದೇಣಿಗೆ ಲೆಕ್ಕ ಕೊಡುವುದಿಲ್ಲ ಎಂದರೆ ಅವರು ದೇವರಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಆರ್‌ಎಸ್‌ಎಸ್‌ಗೆ ದೇಣಿಗೆ ಕೊಡುವವರು ಯಾರು ಎಂಬುದು ತಿಳಿಯಬೇಕು. ದೇವಾಲಯದ ಹುಂಡಿ ಹಣವೂ ಲೆಕ್ಕ ನೀಡಿ ದೇವಾಲಯದ ಜೀರ್ಣೋದ್ಧಾರಕ್ಕೆ ಬಳಸುತ್ತಾರೆ. ಇವರು ದೇವರಿಗಿಂತ ದೊಡ್ಡವರೆಂದರೆ ನಾವು ಕೇಳಬೇಕೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

11 ಸಂಘಟನೆಗಳು ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೋರಿವೆ. ಅದಕ್ಕೆ ಅಧಿಕಾರಿಗಳು ಶಾಂತಿ ಸಭೆ ನಡೆಸುತ್ತಾರೆ. ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳೇ ತೀರ್ಮಾನ ಮಾಡಿ ನ್ಯಾಯಾಲಯಕ್ಕೆ ವರದಿ ನೀಡುತ್ತಾರೆ. ಅದರ ಪ್ರಕಾರ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ತೀರ್ಮಾನವನ್ನು ನಾವು ಪಾಲಿಸುತ್ತೇವೆ ಎಂದು ಪ್ರಿಯಾಂಕ್‌ ಸ್ಪಷ್ಟಪಡಿಸಿದರು.

ಕಾನೂನು ಎಲ್ಲರಿಗೂ ಒಂದೇ:

ನ.2 ರಂದು ಆರ್‌ಎಸ್‌ಎಸ್‌ ಪಥಸಂಚಲನ ಮಾಡುತ್ತೇವೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಕಲ್ಲಡ್ಕ ಪ್ರಭಾಕರ್‌ ಭಟ್ ಕಾನೂನು, ಸಂವಿಧಾನಕ್ಕಿಂತ ದೊಡ್ಡವರಾ? ಕಾನೂನು ಮೀರಿ ಪಥ ಸಂಚಲನ ಮಾಡಿದರೆ ಸರ್ಕಾರ ಸುಮ್ಮನಿರುತ್ತಾ? ಕಲ್ಲಡ್ಕ ಪ್ರಭಾಕರ್‌ ಭಟ್‌ ಅಷ್ಟೇ ಅಲ್ಲ, ಅವರಪ್ಪನಾದ್ರೂ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂದರು.

ಆರ್‌ಎಸ್‌ಎಸ್‌ ಹೊಗಳುವುದು ಬಿಜೆಪಿಯಲ್ಲಿರುವವರಿಗೆ ಅನಿವಾರ್ಯ. ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಜ್ಞಾನ ಇರುವವರು. ಕಾನೂನು ಅರಿವು ಅವರಿಗೆ ಚೆನ್ನಾಗಿದೆ. ಸುಪ್ರಿಂ ಕೋರ್ಟ್ ತನಕ ಬಸವರಾಜ ಬೊಮ್ಮಾಯಿಯವರ ತಂದೆ ಹೋರಾಟ ಮಾಡಿದ್ದರು. ಆ ಹೋರಾಟದ ತೀರ್ಪು ನೋಡಿದರೆ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಬಿಟ್ಟು ಹೊರ ಬರುತ್ತಾರೆ ಎಂದು ತಿರುಗೇಟು ನೀಡಿದರು.

ನಮ್ಮದು ತಪ್ಪಾಗಿದೆ: ಪ್ರಿಯಾಂಕ್‌ ಖರ್ಗೆ

ಹಿಂದೆಲ್ಲ ನಿಮ್ಮ ಸರ್ಕಾರವೇ ಇತ್ತು. ಆಗ ಆರ್‌ಎಸ್‌ಎಸ್‌ ದೇಣಿಗೆ ಬಗ್ಗೆ ಯಾಕೆ ತನಿಖೆ ಮಾಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ‘ಅದೇ ರೀ ತಪ್ಪಾಗಿರೋದು ನಮ್ಮದು... ಸರ್ದಾರ್‌ ಪಟೇಲ್‌ ಅವರಿಂದ ಹಿಡಿದು ಇಂದಿರಾಗಾಂಧಿ ತನಕ ದೊಡ್ಡ ಮನಸ್ಸು ಮಾಡಿ ಮಾಡಿ ಇವರು ಈ ರೀತಿ ಬೆಳೆದಿದ್ದಾರೆ. ಎಲ್ಲಾ ಓಬಿಸಿ, ದಲಿತರನ್ನು ಕಾಲಾಳು ಮಾಡಿಕೊಂಡಿದ್ದಾರೆ’ ಎಂದರು.

Read more Articles on