ಅಡಕೆ ಬೆಳೆ ಮಲೆನಾಡಿನ ವಾತಾವರಣಕ್ಕೆ ಸೂಕ್ತ : ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ

| Published : Jan 23 2025, 12:46 AM IST / Updated: Jan 23 2025, 02:13 PM IST

ಅಡಕೆ ಬೆಳೆ ಮಲೆನಾಡಿನ ವಾತಾವರಣಕ್ಕೆ ಸೂಕ್ತ : ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಸಾಕಷ್ಟು ರೈತ ಉತ್ಪಾದನಾ ಕೇಂದ್ರಗಳೂ ಇವೆ. ಈ ಎಲ್ಲದರ ನಡುವೆ ಕೊಂಡಿಯಾಗಿ ಕಾಲೇಜ್ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರದ ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

ಹಾವೇರಿ: ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಕಾಲೇಜುಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ, ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಯ ಬೆಂಬಲ ಒದಗಿಸಬೇಕು ಎಂದು ರಾಜ್ಯ ಸರ್ಕಾರದ ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

ತಾಲೂಕಿನ ದೇವಿಹೊಸೂರಿನಲ್ಲಿರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಂಯೋಗದಲ್ಲಿ ಆಹಾರ ವಿಜ್ಞಾನದಲ್ಲಿ ನವ ಆವಿಷ್ಕಾರಗಳ ಕುರಿತು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಹಾವೇರಿ ಜಿಲ್ಲೆ ಮೆಣಸಿನಕಾಯಿ, ಮಾವು, ಸಾಂಬಾರ ಪದಾರ್ಥಗಳು ಸೇರಿದಂತೆ ವೈವಿಧ್ಯಮಯ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಪಿಎಂಎಫ್‌ಎಇ ಯೋಜನೆಯಡಿ ₹30 ಲಕ್ಷ ವರೆಗೆ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ ನೀಡುತ್ತಾರೆ. ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಸಣ್ಣ ಉದ್ಯಮಿಗಳಿಗೆ ಸಹಾಯ ಒದಗಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ರೈತ ಉತ್ಪಾದನಾ ಕೇಂದ್ರಗಳೂ ಇವೆ. ಈ ಎಲ್ಲದರ ನಡುವೆ ಕೊಂಡಿಯಾಗಿ ಕಾಲೇಜ್ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಹಾವೇರಿ ಜಿಲ್ಲೆಯಲ್ಲೂ ಈಗೀಗ ಹೆಚ್ಚಿನ ರೈತರು ಅಡಕೆ ಬೆಳೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅಡಕೆ ಬೆಳೆ ಮಲೆನಾಡಿನ ವಾತಾವರಣಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಮಲೆನಾಡಲ್ಲಿ ಬಂದಷ್ಟು ಇಳುವರಿ ಈ ಭಾಗದಲ್ಲಿ ಬರುವುದು ಕಷ್ಟಕರ. ಈ ನಿಟ್ಟಿನಲ್ಲಿ ರೈತರು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಮುಂದುವರಿದರೆ ಸೂಕ್ತ ಎಂದು ರೋಹಿಣಿ ಸಿಂಧೂರಿ ಹೇಳಿದರು.

ತೋಟಗಾರಿಕಾ ವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಬಿ. ದಂಡಿನ ಮಾತನಾಡಿ, ಹಣ್ಣು ಕೊಟ್ಟು ಪುಣ್ಯ ಕಟ್ಟಿಕೊಳ್ಳಬೇಕು. ಗಿಡ ಕೊಟ್ಟು ಪಾಪ ತೊಳೆದುಕೊಳ್ಳೇಕು ಎಂಬ ಮಾತಿದೆ. ಗಿಡ, ಮರಗಳ ಸಂಖ್ಯೆ ಹೆಚ್ಚಾಗಬೇಕು. ತೋಟಗಾರಿಕಾ ಬೆಳೆಗಳು ಹೆಚ್ಚಾದರೆ ಅದೂ ಪರಿಸರಕ್ಕೆ ನೀಡುವ ಕೊಡುಗೆಯಾಗುತ್ತದೆ. ಮೆಣಸಿನಕಾಯಿ ಪೌಡರ್ ಕಾಸ್ಮೆಟಿಕ್‌ಗಳ ತಯಾರಿಕೆಗೆ ಬಳಸಲಾಗುತ್ತಿದೆ. ಹಲವರು ಅಕ್ಕಿ, ಗೋದಿ ಮೇಲೆ ಹೆಚ್ಚಿನ ಅವಲಂಬನೆ ಆಗಿದ್ದಾರೆ. ನವಣೆ, ಸಜ್ಜೆ, ಅರ್ಕದಂಥ ಇತರ ಆಹಾರ ಪದಾರ್ಥಗಳನ್ನು ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂದರು.

ಇಂದಿನ ದಿನಗಳಲ್ಲಿ ಜ್ಞಾನದ ಜತೆಗೆ ಕೌಶಲ ಅತ್ಯಗತ್ಯವಾಗಿ ಬೇಕಾಗುತ್ತದೆ. ಮಾವು, ಹಲಸು, ದ್ರಾಕ್ಷಿ, ಇತರ ತೋಟಗಾರಿಕಾ ಬೆಳೆಗಳು ಆಯಾ ಸೀಸನ್‌ನಲ್ಲಿ ಮಾತ್ರ ಸಿಗುತ್ತವೆ. ಅವುಗಳನ್ನು ಬಳಸಿಕೊಂಡು ಸಂಸ್ಕರಿಸಿ ಇಡಬಹುದಾದ ಆಹಾರ ತಯಾರಿಸಿ ವರ್ಷವಿಡೀ ಸಿಗುವಂತೆ ಮಾಡಬೇಕು. ಇದರಿಂದ ರೈತರು, ಉತ್ಪಾದಕರು, ಮಾರಾಟಗಾರರು ಎಲ್ಲರಿಗೂ ಆದಾಯ ದೊರೆಯುತ್ತದೆ ಎಂದರು.

ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯ, ವಿದೇಶಗಳಿಂದ 280 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಮಾರಂಭರAಭದಲ್ಲಿ ಬಾಗಲಕೋಟ ವಿವಿ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ, ಬಾಗಲಕೋಟ ವಿವಿ ಆಡಳಿತ ಮಂಡಳಿ ಸದಸ್ಯ ಡಾ.ಮಹಾಂತಗೌಡ, ಮಹಾವಿದ್ಯಾಲಯದ ಡೀನ್ ಡಾ.ಬಿ.ಫಕ್ರುದ್ದೀನ, ಡಾ.ಕಿರಣ ನಾಗಜ್ಜನವರ, ಡಾ.ತಿಪ್ಪಣ್ಣ ಕೆ.ಎಸ್., ಇತರರು ಉಪಸ್ಥಿತರಿದ್ದರು.

ತೋಟಗಾರಿಕೆ ಬೆಳೆಯಿಂದ ಮೂರು ಲಾಭ: ತೋಟಗಾರಿಕಾ ಬೆಳಗಳಲ್ಲಿ ಆಹಾರ, ಆರೋಗ್ಯ, ಆದಾಯ ಮೂರು ಲಾಭಗಳಿವೆ. ಇದನ್ನು ರೈತರು, ತೋಟಗಾರಿಕೆ ವಿದ್ಯಾರ್ಥಿಗಳು ಅರಿಯಬೇಕು. ಇತ್ತೀಚೆಗೆ ಎಲ್ಲೆಡೆ ಆಹಾರದ ಕೊರತೆ ಹೆಚ್ಚಾಗುತ್ತಿದೆ. ವಿಟಮಿನ್‌ಗಳ ಕೊರತೆಯಿಂದ ಶೇ. 40ರಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಮಿನರಲ್ ಕೊರತೆಯಿಂದ ಬಳಲುತ್ತಿದ್ದಾರೆ. ಹಲವು ಜನ ಲಿವರ್ ತೊಂದರೆಗೆ ಒಳಗಾಗುತ್ತಿದ್ದಾರೆ ಇದಕ್ಕೆಲ್ಲ ಪರಿಹಾರ ನಮ್ಮ ಆಹಾರದಲ್ಲಿದೆ ಎಂದು ವಿಶ್ರಾಂತ ಕುಲಪತಿ ಡಾ. ಎಸ್.ಬಿ. ದಂಡಿನ ಹೇಳಿದರು.