ಸಾರಾಂಶ
ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರದಲ್ಲಿ ಮಂಗಳವಾರ ಆಯೋಜಿಸಲಾದ ಕಾಂಗ್ರೆಸ್ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಚಿಂತಕ ನಿಕೇತ್ ರಾಜ್ ಮೌರ್ಯ ಮಾತನಾಡಿ, ಬಿಜೆಪಿ ನೃತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಡಕೆ ಬೆಳೆಗಾರರು ಇದ್ದಾರೆ. ಆದರೆ ಈ ರೈತರಿಗೆ ನ್ಯಾಯ ಒದಗಿಸಿಕೊಡಲು ಬಿಜೆಪಿ ಸರ್ಕಾರದಿಂದ ಆಗಿಲ್ಲ. ಇಲ್ಲಿ ವಿದೇಶದಿಂದ ಅಡಕೆ ಆಮದಿಗೆ ಬಿಜೆಪಿ ಮುಂದಾಗಿದೆ. ಭೂತಾನ್ ಅಡಕೆಗೆ ಮಣೆ ಹಾಕಲಾಗಿದೆ. ಇದರಿಂದ ರೈತರ ಅಡಕೆ ತೋಟಗಳು ಅವನತಿಯ ಹಂತ ತಲುಪಲಿವೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿಂತಕ ನಿಕೇತ್ ರಾಜ್ ಮೌರ್ಯ ಆತಂಕ ವ್ಯಕ್ತಪಡಿಸಿದ್ದಾರೆ.ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರದಲ್ಲಿ ಮಂಗಳವಾರ ಆಯೋಜಿಸಲಾದ ಕಾಂಗ್ರೆಸ್ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತುವ ಕಾರ್ಯ ಆಗಬೇಕು. ಇದು ನಿಜವಾದ ಭಾರತದ ಕಲ್ಪನೆ. ಆದರೆ, ಪ್ರಸ್ತುತ ಬಿಜೆಪಿ ಆಡಳಿತದಿಂದ ಕೆಳಗೆ ಬಿದ್ದವರು ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯವರ ಎಂದು ನೋಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲ್ಲದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರವನ್ನು ಜನ ಸಾಮಾನ್ಯರು ನಂಬಕೂಡದು ಎಂದರು.ನಟ ದುನಿಯಾ ವಿಜಯ್ ಮಾತನಾಡಿದರು.
ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ್ ಶೆಟ್ಟಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಆರ್.ರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು ಪೂಜಾರಿ, ಬೈಂದೂರು ಚುನಾವಣೆ ಉಸ್ತುವಾರಿ ಜಿ.ಎ.ಭಾವ, ಪ್ರಮುಖರಾದ ಮಹಿಳಾ ಅಧ್ಯಕ್ಷ ಗೌರಿ ದೇವಾಡಿಗ, ಇಂದಿರಾ, ಅರವಿಂದ ಪೂಜಾರಿ,ಮದನ್ ಕುಮಾರ್, ಚಂದ್ರ ಪೂಜಾರಿ, ಶಂಕರ್ ಪೂಜಾರಿ, ಉದಯ ಕುಮಾರ್ ಶೆಟ್ಟಿ ಸೇರಿ ಕಾರ್ಯಕರ್ತರು ಇದ್ದರು.