ಸಂಡೂರು ಉಪ ಚುನಾವಣೆಗೆ ಅಖಾಡ ಸಜ್ಜು

| Published : Oct 16 2024, 12:50 AM IST

ಸಾರಾಂಶ

ನ.13ರಂದು ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ಸಂಡೂರು ಹೈವೋಲ್ಟೇಜ್ ಕ್ಷೇತ್ರ ಎನಿಸಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ರಾಜಕೀಯ ಅಖಾಡಕ್ಕೆ ವೇದಿಕೆ ಸಜ್ಜಾಗಿದೆ. ನ.13ರಂದು ಚುನಾವಣೆ ನಡೆಸಿ, ನ.23ರಂದು ಫಲಿತಾಂಶ ಪ್ರಕಟಿಸಲು ಚುನಾವಣೆ ಆಯೋಗ ನಿರ್ಧರಿಸಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಿಂದ (ಪಪಂ ಮೀಸಲು) ಸತತ ನಾಲ್ಕು ಬಾರಿ ಚುನಾಯಿತಗೊಂಡಿದ್ದ ಈ.ತುಕಾರಾಂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸಂಡೂರು ವಿಧಾನಸಭಾ ಕ್ಷೇತ್ರ ಮತ್ತೊಂದು ಚುನಾವಣೆಗೆ ಅಣಿಯಾಗಿದೆ. ನ.13ರಂದು ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ಸಂಡೂರು ಹೈವೋಲ್ಟೇಜ್ ಕ್ಷೇತ್ರ ಎನಿಸಿದೆ.

ಕಾಂಗ್ರೆಸ್‌ ಭದ್ರಕೋಟೆ:

ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದು ಈ ಹಿಂದಿನ ಎಲ್ಲ ಚುನಾವಣೆಯಲ್ಲೂ ಸಾಬೀತಾಗಿದೆ. 1985ರಲ್ಲಿ ಸಿಪಿಐ ಅಭ್ಯರ್ಥಿ ಯು.ಭೂಪತಿ, 2004ರಲ್ಲಿ ಸಂತೋಷ್ ಲಾಡ್ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಉಳಿದ ಎಲ್ಲ ಚುನಾವಣೆಯಲ್ಲೂ ಸಂಡೂರು ಕ್ಷೇತ್ರದ ಮತದಾರರು ಕಾಂಗ್ರೆಸ್‌ ಕೈಹಿಡಿದಿದ್ದಾರೆ. ಕ್ಷೇತ್ರ ಮರು ವಿಂಗಡಣೆ ಬಳಿಕ ಜರುಗಿದ ಸತತ ನಾಲ್ಕು ಚುನಾವಣೆಯಲ್ಲಿ ತುಕಾರಾಂ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂದರೆ ತಾಪಂ, ಜಿಪಂ ಸದಸ್ಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರೇ ಆಯ್ಕೆಯಾಗುತ್ತಾರೆ. ಗ್ರಾಪಂ ಚುನಾವಣೆಯಲ್ಲೂ ಕೈ ಪಕ್ಷದ ಬೆಂಬಲಿಗರೇ ಹೆಚ್ಚಾಗಿ ಚುನಾಯಿತಗೊಳ್ಳುವುದು ಕಾಂಗ್ರೆಸ್‌ನ ಪ್ರಾಬಲ್ಯ ಸಾಕ್ಷೀಕರಿಸುತ್ತದೆ.

ಸಂಡೂರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್, ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ (ಅ.14) ಸಂಡೂರಿನಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಡೂರು ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ. ನಾನು, ಡಿ.ಕೆ. ಶಿವಕುಮಾರ್ ಇಲ್ಲಿ ಬಂದು ವಾಸ್ತವ್ಯ ಹೂಡುತ್ತೇವೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಚುನಾವಣೆ ಜವಾಬ್ದಾರಿ ತೆಗೆದುಕೊಂಡರೂ ಸರಿಯೇ ಸಂಡೂರು ಕ್ಷೇತ್ರದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ಬಳ್ಳಾರಿಗೆ ಬರಲು ಅನುಮತಿ ಪಡೆದುಕೊಂಡ ಗಾಲಿ ಜನಾರ್ದನ ರೆಡ್ಡಿ ಸಹ ಸಂಡೂರು ಉಪ ಚುನಾವಣೆಯ ಗೆಲುವಿನೊಂದಿಗೆ ಬಿಜೆಪಿಯ ವಿಜಯಯಾತ್ರೆ ಶುರುಗೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಇಬ್ಬರು ನಾಯಕರ ಘೋಷಣೆಗಳಿಂದಾಗಿ ಸಂಡೂರು ಉಪ ಚುನಾವಣೆ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.

ಆಕಾಂಕ್ಷಿಗಳು ಯಾರು?:

ಸಂಡೂರು ಉಪ ಚುನಾವಣೆ ಸ್ಪರ್ಧೆಗೆ ಕಮಲ ಪಕ್ಷದಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಹಾಲಿ ಸಂಸದ ಈ.ತುಕಾರಾಂ ಪತ್ನಿ, ಪುತ್ರಿ ಹಾಗೂ ಮಾಜಿ ಜಿಪಂ ಸದಸ್ಯ ಲಕ್ಷ್ಮಣ ಹೊರತುಪಡಿಸಿದರೆ ಹೆಚ್ಚಿನ ಆಕಾಂಕ್ಷಿಗಳಿಲ್ಲ.

ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ, ಪುತ್ರಿ ಸೌಪರ್ಣಿಕಾಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಜಿಪಂ ಮಾಜಿ ಸದಸ್ಯ ಹಾಗೂ ಸಂತೋಷ್‌ ಲಾಡ್ ಆಪ್ತ ಟಿ.ಲಕ್ಷ್ಮಣ್ ಉಪ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಕೋರಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಸಂಸದ ವೈ.ದೇವೇಂದ್ರಪ್ಪ, ಬಂಗಾರು ಹನುಮಂತ, ಬಳ್ಳಾರಿಯ ಕೆ.ಎಸ್. ದಿವಾಕರ, ಡಿ.ಪ್ರಹ್ಲಾದ, ತೋರಣಗಲ್ ರಾಮಕೃಷ್ಣ, ಆರ್‌.ಟಿ. ರಘು ಸೇರಿದಂತೆ 21 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಂಗಾರು ಹನುಮಂತು, ವೈ.ದೇವೇಂದ್ರಪ್ಪ ಹಾಗೂ ಕೆ.ಎಸ್. ದಿವಾಕರ ನಡುವೆ ತೀವ್ರ ಪೈಪೋಟಿಯಿದೆ. ಹೈಕಮಾಂಡ್ ಒಲವು ಯಾರ ಕಡೆಯಿದೆ ಎಂಬುದರ ಮೇಲೆ ಅಭ್ಯರ್ಥಿ ಘೋಷಣೆ ನಿಂತಿದೆ.

ಸಂಡೂರು ಕ್ಷೇತ್ರದ ಮತದಾರರು:

ಮಹಿಳೆಯರು-1,18,279

ಪುರುಷರು- 1,17,739

ತೃತೀಯ ಲಿಂಗಿ ಮತದಾರರು- 29

ಒಟ್ಟು ಮತದಾರರು; 2,36,047

ಜಾತಿವಾರು ಲೆಕ್ಕಾಚಾರ:

ಪರಿಶಿಷ್ಟ ಜಾತಿ- 41,676

ಪ.ಪಂ. (ವಾಲ್ಮೀಕಿ)- 59,312

ಕುರುಬರು- 24,701

ಮುಸ್ಲಿಂ- 24,588

ಲಿಂಗಾಯತ- 30,024

ಹಿ.ವರ್ಗ- 41,506

ಇತರೆ ಜಾತಿ- 15,000

ಒಟ್ಟು ಮತದಾರರು----- 2,17,402