ಸಾರಾಂಶ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಎನ್. ಸಂಪಂಗಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಕೆಲ ಸಮಯ ವಾಗ್ವಾದ ಉಂಟಾಯಿತು.ಈಗಾಗಲೇ ಬೆಂಗಳೂರು ಬೋರ್ಡ್‌ಗಳಿಗೆ ನಾಮಿನೇಶನ್ ಮಾಡುವುದಕ್ಕೆ ಕರೆದಿದ್ದು, ಸಿದ್ದರಾಮಯ್ಯ ಅವರು ಕಮಿಟಿಯೇ ಮಾಡಿದ್ದಾರೆ. ನಮ್ಮ ಕಡೆಯಿಂದ ಎಷ್ಟು ಜನ ಬೇಕು ಎನ್ನುವ ಬಗ್ಗೆ ಮಾಹಿತಿ ಬೇಕಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಎನ್. ಸಂಪಂಗಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಕೆಲ ಸಮಯ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಸಂಪಂಗಿ ಮಾತನಾಡಿ, ಪಕ್ಷವನ್ನು ನಿಷ್ಠೆಯಿಂದ ಕಟ್ಟುತ್ತಿರುವವರ ಹೆಸರನ್ನು ನಮಗೆ ಕೊಡಿ, ಯೂತ್ ಕಾಂಗ್ರೆಸ್‌ನಲ್ಲಿ ಯಾರು ಆಕ್ಟಿವ್ ಇದ್ದಾರೆ, ಆಯ್ಕೆ ಆದ ಮೇಲೆ ಅವರ ಪದಾಧಿಕಾರಿಗಳು ಯಾರು ಇದ್ದಾರೆ ನಮಗೆ ಮಾಹಿತಿ ಕೊಡಬೇಕು. ಈಗಾಗಲೇ ಬೆಂಗಳೂರು ಬೋರ್ಡ್‌ಗಳಿಗೆ ನಾಮಿನೇಶನ್ ಮಾಡುವುದಕ್ಕೆ ಕರೆದಿದ್ದು, ಸಿದ್ದರಾಮಯ್ಯ ಅವರು ಕಮಿಟಿಯೇ ಮಾಡಿದ್ದಾರೆ. ನಮ್ಮ ಕಡೆಯಿಂದ ಎಷ್ಟು ಜನ ಬೇಕು ಎನ್ನುವ ಬಗ್ಗೆ ಮಾಹಿತಿ ಬೇಕಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ನಿಮ್ಮ ಸಮಸ್ಯೆಯನ್ನು ಕೇಳಿ ಆಲಿಸುವುದಕ್ಕೆ ಜಿಲ್ಲಾ ಉಸ್ತುವಾರಿಯಾಗಿ ಮಾಜಿ ಶಾಸಕ ಸಂಪಂಗಿ ಅವರು ಇಲ್ಲಿಗೆ ಬಂದಿದ್ದು, ಏನೇ ಇದ್ದರೂ ಒಬ್ಬೊಬ್ಬರಾಗಿ ಹೇಳಬಹುದು ಎಂದು ಕಾರ್ಯಕರ್ತರಿಗೆ ಹೇಳಿದರು. ಯಾರೋ ಮಂತ್ರಿ ಹಿಂದೆ ಇರುತ್ತಾರೆ ಅವರೇ ಎಲ್ಲವನ್ನು ಆರಿಸಿಬಿಡುತ್ತಾರೆ, ನಾವು ಕಳುಹಿಸಿದ ಪಟ್ಟಿ ಯಾರು ಕಳುಹಿಸುವುದಿಲ್ಲ. ಯಾರು ಹೋಗುತ್ತಾರೆ ಅವರು ಬರೆಯಿಸಿಕೊಂಡು ಬರುತ್ತಾರೆ ಎಂದು ಬೇಸರದಲ್ಲಿ ಹೇಳಿದಾಗ ಸ್ವಲ್ಪ ಗೊಂದಲ ಉಂಟಾಯಿತು.ಇನ್ನು ಅಬ್ದುಲ್ ಸಮಾದ್ ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೌರವ ಇಲ್ಲ ಎಂದ ಮೇಲೆ ನೀವು ಏಕೆ ಜವಾಬ್ದಾರಿ ತೆಗೆದುಕೊಳ್ಳುತ್ತೀರಾ, ಕೆಪಿಸಿಸಿ ನಿರ್ದೇಶನದಂತೆ ಮಾಡಬೇಕು. ನಮ್ಮನ್ನು ಗೌರವಯುತವಾಗಿ ಯಾವತ್ತೂ ನಡೆಸಿಕೊಂಡಿಲ್ಲ ಎಂದು ಹೇಳಿದಾಗ ಅಧ್ಯಕ್ಷರ ವಿರುದ್ಧ ಜಿಲ್ಲಾ ಉಸ್ತುವಾರಿ ಎದುರೇ ವಾಗ್ವಾದ ಉಂಟಾಯಿತು. ಪಕ್ಷದಲ್ಲಿ ಕೆಳಮಟ್ಟದಿಂದ, ಬೇಸಿಕ್‌ನಿಂದ ಕೆಲಸ ಮಾಡುವವರು ಯಾರೂ ಇಲ್ಲ. ಇದ್ದರೂ ಬರುವುದಿಲ್ಲ, ಹಾಸನದಲ್ಲಿ ಅಷ್ಟೊಂದು ಕೊರತೆ ಆಗಿದೆ. ದಯಮಾಡಿ ಪಾರ್ಟಿಯಲ್ಲಿ ಬೇಸಿಕ್‌ನಿಂದ ಪಕ್ಷ ಕಟ್ಟಬೇಕು. ಆ ನಿಟ್ಟಿನಲ್ಲಿ ನೀವು ವ್ಯವಸ್ಥೆ ಮಾಡಬೇಕಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಕಾರ್ಯಕರ್ತರು ಹೇಳಿದರು.
ಇದೇ ವೇಳೆ ಮಾಜಿ ಶಾಸಕ ಸಂಪಂಗಿ ಮಾಧ್ಯಮದವರನ್ನು ಸುದ್ದಿ ಮಾಡದಂತೆ ತಡೆಯಲು ಮುಂದಾದರು. ಪಕ್ಷದಲ್ಲಿನ ಈ ಗೊಂದಲದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಇಲ್ಲಿ ಯಾವ ಗೊಂದಲ ಇಲ್ಲ. ನೀವು ಕ್ರಿಯೆಟಿವಿಟಿ ಮಾಡಲು ಹೋಗಬೇಡಿ ಎಂದು ದಬಾಯಿಸಿದರು. ಆದರೆ ಇದಾದ ಬಳಿಕ ಹೊರಗೆ ಬಂದಾಗ ಸಭೆಯಲ್ಲಿ ನೀವು ಕೇಳಿದ ಪ್ರಶ್ನೆ ಸತ್ಯ ಎಂದು ಅವರ ಪಕ್ಷದವರೇ ನಡೆದ ಘಟನೆ ಸತ್ಯ ಎಂದು ತಿಳಿಸಿದರು. ಮತ್ತೆ ಕೊನೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎನ್. ಸಂಪಂಗಿಯವರೇ ಮಾಧ್ಯಮದೊಂದಿಗೆ ಮಾತನಾಡುತ್ತಾ, ಹಾಸನ ಜಿಲ್ಲಾ ಕಚೇರಿಯಲ್ಲಿ ಕಾಂಗ್ರೆಸ್ ಸಭೆಯನ್ನು ಕರೆದಿದ್ದು, ಡಿಸೆಂಬರ್ ೨೬,೨೭ ಮತ್ತು ೨೮ರಂದು ಬೆಳಗಾಂನಲ್ಲಿ ಮಹಾತ್ಮ ಗಾಂಧಿಯವರು ಅಧಿವೇಶನ ನಡೆಸಿ ನೂರು ವರ್ಷಗಳ ಕಾಲ ಆಗಿದೆ. ಈ ಹಿನ್ನೆಲೆಯಲ್ಲಿ ಅದರ ಜ್ಞಾಪಕಾರ್ಥವಾಗಿ ಅದೇ ದಿವಸ ದೊಡ್ಡ ಕಾರ್ಯಕ್ರಮ ಎಸಿಸಿ ಅಧಿವೇಶನ ನಡೆಯುತ್ತದೆ ಎಂದರು. ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಖರ್ಗೆ, ಎಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಅಧಿವೇಶ ನಡೆಯುತ್ತದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ವಹಿಸಲಿದ್ದಾರೆ. ಈ ಅಧಿವೇಶನದಲ್ಲಿ ನಮ್ಮ ಹಾಸನ ಜಿಲ್ಲೆಯಿಂದ ಎಲ್ಲರೂ ಭಾಗವಹಿಸಬೇಕಾಗಿದೆ. ಈ ಉದ್ದೇಶದಿಂದ ಹಾಸನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಭೆ ಸೇರಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ದೊಡ್ಡ ಕುಟುಂಬ ಇದು. ಕುಟುಂಬದಲ್ಲಿ ಆಗುಹೋಗುಗಳು ಇರುತ್ತದೆ, ಇಲ್ಲಿ ಯಾವ ಗೊಂದಲ ಆಗಿರುವುದಿಲ್ಲ. ಅಧಿವೇಶನಕ್ಕೆ ಜಿಲ್ಲೆಯಿಂದ ೧೦ರಿಂದ ೧೫ ಸಾವಿರ ಜನ ಪ್ರಯಾಣ ಬೆಳೆಸುತ್ತೇವೆ.ದೀ ವಿಚಾರವಾಗಿ ಚರ್ಚೆ ಮಾಡುತ್ತಿರುವುದಾಗಿ ಹೇಳಿದರು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಶ್ರೀನಿವಾಸ್ ಮೂರ್ತಿ, ಅಬ್ದೂಲ್ ಸಮಾದ್, ಪಕ್ಷದ ಮುಖಂಡರಾದ ಬನವಾಸೆ ರಂಗಸ್ವಾಮಿ, ವಿನಯ್ ಗಾಂಧಿ, ಮಂಜುನಾಥ ಶರ್ಮ, ಅಬ್ದೂಲ್ ಕಹಿಂ, ರಘು ದಾಸರಕೊಪ್ಪಲು, ಕುಮಾರಸ್ವಾಮಿ, ಅಶೋಕ್, ಶಿವಕುಮಾರ್, ಗೊರೂರು ರಂಜಿತ್, ಇತರರು ಉಪಸ್ಥಿತರಿದ್ದರು.=====================
ಫೋಟೋ :ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಸಂಪಂಗಿ ಮಾತನಾಡಿದರು.