ಸಾರಾಂಶ
ವಸಂತಕುಮಾರ್ ಕತಗಾಲಕಾರವಾರ: ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಚಿರತೆ ಹಾವಳಿ ಉಂಟಾಗುತ್ತಿದೆ. ನಾಯಿ, ಹಸುಗಳ ಬೇಟೆ ಸಾಮಾನ್ಯವಾದರೆ, ಆಗಾಗ ಜನರ ಮೇಲೂ ದಾಳಿ ಮಾಡುತ್ತಿದೆ. ಇದರಿಂದ ಜನತೆ ಚಿರತೆ ಹಾವಳಿಯಿಂದ ಆತಂಕಕ್ಕೀಡಾಗಿದ್ದಾರೆ. ಸದ್ಯ ಹೊನ್ನಾವರ ತಾಲೂಕಿನ ಸಂತೆಗುಳಿ, ನೀಲಕೋಡ, ಅರೆಅಂಗಡಿ, ಕೆರೆಕೋಣ ಅಂದರೆ ಹೊಸಾಕುಳಿಯಲ್ಲಿ ಚಿರತೆಯ ಹಾವಳಿ ಮಿತಿ ಮೀರಿದೆ. ಮೊದಲು ಜನರಿಗೆ ಆಗಾಗ ಕಾಣಿಸಿಕೊಂಡು ಹೆದರಿಕೆ ಹುಟ್ಟಿಸುತ್ತಿತ್ತು. ನಂತರ ರಾತ್ರಿ ವೇಳೆ ನಾಯಿಗಳನ್ನು ಬೇಟೆಯಾಡತೊಡಗಿತು. ಇತ್ತೀಚೆಗೆ ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದೆ. ಸತ್ಯನಾರಾಯಣ ಹೆಗಡೆ ಎನ್ನುವವರು ಸ್ವಲ್ಪದರಲ್ಲೆ ಪಾರಾದರೆ, ರವಿ ಶಂಭು ಹೆಗಡೆ ಅವರ ಮೇಲೆ ದಾಳಿ ನಡೆಸಿ ಕಾಲನ್ನು ಕಚ್ಚಿ ಗಾಯಗೊಳಿಸಿದೆ. ಮುಸ್ಸಂಜೆಯಾಗುತ್ತಿದ್ದಂತೆ ಸಂಚರಿಸಲು ಜನ ಭಯಪಡುವಂತಾಗಿದೆ. ಇದೊಂದು ಉದಾಹರಣೆ ಮಾತ್ರ. ವಿವಿಧೆಡೆ ಆಗಾಗ ಚಿರತೆ ಹಾವಳಿ ಆಗುತ್ತಿದೆ. ಪಂಜರದಲ್ಲಿ ಹಿಡಿದು ಬೇರೆಡೆ ಬಿಟ್ಟರೆ, ಇನ್ನೊಂದೆಡೆ ಹಾವಳಿ ಉಂಟಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಚಿರತೆಗಳ ಸಂಖ್ಯೆ ಸ್ವಲ್ಪ ಹೆಚ್ಚಿರುವುದು ಹೌದು. ಜತೆಗೆ ಕಸ ಎಸೆಯುವುದು ಚಿರತೆ ಹಾವಳಿಗೆ ಒಂದು ಪ್ರಮುಖ ಕಾರಣವಾಗಿದೆ. ಚಿರತೆ ಬಹುತೇಕ ಮಾನವನ ಆವಾಸ ಸ್ಥಾನದ ಸಮೀಪವೇ ಇರುತ್ತದೆ. ನಾಯಿಗಳು, ಚಿಕ್ಕ ಹಸುಗಳು(ಕರುಗಳು)ಸಿಕ್ಕರೆ ಸಾಕು. ಹುಲಿಯಂತೆ ಕಾಡುಕೋಣ, ದೊಡ್ಡ ಹಸುಗಳನ್ನು ಹೊಂಚು ಹಾಕಿ ಬೇಟೆಯಾಡುವುದಕ್ಕಿಂತ ಸುಲಭವಾಗಿ ಸಿಗುವ ನಾಯಿ, ಹಸುಗಳನ್ನು ಬೇಟೆಯಾಡಲು ಬರುತ್ತವೆ. ಎಲ್ಲೆಂದರಲ್ಲಿ ಕಸ ಎಸೆಯುವುದು ಚಿರತೆ ಹಾವಳಿಗೆ ಮತ್ತೊಂದು ಕಾರಣ. ತ್ಯಾಜ್ಯ ಎಸೆಯುವುದರಿಂದ ಅದನ್ನು ತಿನ್ನಲು ರಾತ್ರಿ ವೇಳೆ ನಾಯಿಗಳು ಹೋಗುತ್ತವೆ. ಚಿರತೆಗಳು ಈ ನಾಯಿಗಳನ್ನು ಹಿಡಿದು ತಿನ್ನುತ್ತವೆ. ತ್ಯಾಜ್ಯ ಎಸೆಯುವಲ್ಲೆಲ್ಲ ನಾಯಿಗಳು ಬರುತ್ತವೆ ಎಂದು ಚಿರತೆಗಳು ಹೊಂಚು ಹಾಕುತ್ತಿರುತ್ತವೆ.ಮೂರು ವರ್ಷಗಳ ಹಿಂದೆ ಐಎನ್ಎಸ್ ಕದಂಬ ನೌಕಾನೆಲೆ ಸಮೀಪ ಚಿರತೆ ಹಾವಳಿ ಉಂಟಾಗಿತ್ತು. ಇಲ್ಲೂ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಆ ತ್ಯಾಜ್ಯ ತಿನ್ನಲು ಬರುವ ನಾಯಿಗಳನ್ನು ಬೇಟೆಯಾಡಲು ಚಿರತೆ ಬರುತ್ತಿತ್ತು. ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿದ ಮೇಲೆ ಚಿರತೆ ಹಾವಳಿಯೂ ನಿಂತಿತು.ಚಿರತೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೆ ಊರಿನಲ್ಲಿ ಚಿರತೆ ಕಂಡುಬಂದಲ್ಲಿ ತಕ್ಷಣ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ತಕ್ಷಣ ಕ್ರಮ: ಚಿರತೆ ದಾಳಿ ಹಿಂದೆಯೂ ಇತ್ತು. ಆದರೆ ಆಗ ಹೊರಗಡೆ ಗೊತ್ತಾಗುತ್ತಿರಲಿಲ್ಲ. ಈಗ ಸಾಮಾಜಿಕ ಜಾಲತಾಣ ಇರುವುದರಿಂದ ಹೆಚ್ಚು ಬೆಳಕಿಗೆ ಬರುತ್ತಿದೆ. ಹಾಗಂತ ಚಿರತೆಗಳ ಸಂಖ್ಯೆಯಲ್ಲೂ ಸ್ವಲ್ಪ ಹೆಚ್ಚಳ ಆಗಿರುವುದು ಹೌದು. ಚಿರತೆಯಿಂದ ಜನತೆ, ಜಾನುವಾರುಗಳಿಗೆ ತೊಂದರೆ ಆದಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೆನರಾ ವೃತ್ತದ ಸಿಸಿಎಫ್ ವಸಂತ ರೆಡ್ಡಿ ತಿಳಿಸಿದರು.