ಸಾರಾಂಶ
ಹಾನಗಲ್ಲ: ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ ಕೊಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ೨ನೇ ಸ್ಥಾನದಲ್ಲಿದೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ಶಿಕ್ಷಣ, ಸಾರಿಗೆ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಗಳಿಗೆ ಬೇಕಿರುವ ಸೌಲಭ್ಯ ಮತ್ತು ಅನುದಾನದ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಸಹಾಯಕ್ಕೆ ಬರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಸೃಷ್ಟಿಯ ಮುನಿಸಿನ ಕಾರಣ ಸರ್ಕಾರ ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುತ್ತಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಹಾಗಾಗಿ ಮೂಲಭೂತ ಸೌಲಭ್ಯ ಕಲ್ಪಿಸುವುದು ಕಷ್ಟಸಾಧ್ಯವಾಗಿದೆ. ಪ್ರಮುಖವಾಗಿ ಶಿಕ್ಷಣ, ಸಾರಿಗೆ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಗಳನ್ನು ಬಲಪಡಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ ರಾಜ್ಯದಿಂದ ಗರಿಷ್ಠ ಪ್ರಮಾಣದ ಆದಾಯ ಗಳಿಸುತ್ತಿರುವ ಕೇಂದ್ರ ಸರ್ಕಾರ ನೆರವಿಗೆ ಧಾವಿಸಲಿ ಎಂದು ಒತ್ತಾಯಿಸಿದರು.ನದಿಗಳ ಜೋಡಣೆಯ ಭರವಸೆ ನೀಡಿದ್ದ ಬಿಜೆಪಿ ವರದಾ ಮತ್ತು ಬೇಡ್ತಿ ನದಿಗಳ ಜೋಡಣೆಗೆ ಆಸಕ್ತಿ ವಹಿಸಬೇಕಿದೆ. ಈ ನದಿಗಳ ಜೋಡಣೆಯ ಕನಸು ನನಸಾದರೆ ಒಂದು ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಅರಬ್ಬಿ ಸಮುದ್ರಕ್ಕೆ ಸೇರುತ್ತಿರುವ ೧೦೦ ಟಿಎಂಸಿ ನೀರನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ. ೨೦೧೦ರಲ್ಲಿ ಆಗಿನ ಕೇಂದ್ರ ಸರ್ಕಾರ ಈ ಯೋಜನೆಯ ವೆಚ್ಚ ಸಹ ಭರಿಸುವುದಾಗಿ ಹೇಳಿತ್ತು. ಆದರೆ ಆ ಸಂದರ್ಭದ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಮಹತ್ವಾಕಾಂಕ್ಷೆಯ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಶ್ರೀನಿವಾಸ ಮಾನೆ ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ಹೊಸ ಕೊಠಡಿ ನಿರ್ಮಿಸಲು ಅನುದಾನದ ಕೊರತೆ ಇದ್ದು, ಒಂದೇ ಕೊಠಡಿಯಲ್ಲಿ ೨, ೩ ತರಗತಿ ನಡೆಸುವಂಥ ಸ್ಥಿತಿ ಇದೆ. ಕೇಂದ್ರ ಸರ್ಕಾರ ಪಿಎಂಶ್ರೀ ಯೋಜನೆ ಜಾರಿಗೊಳಿಸಿದ್ದು, ಯೋಜನೆಯ ಲಾಭ ಶಾಲೆಗಳಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಾನೆ, ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅನನುಕೂಲ ಉಂಟಾಗಿದೆ. ವಿದ್ಯಾರ್ಥಿಗಳು ಬಸ್‌ಗಳಲ್ಲಿ ಜೋತು ಬಿದ್ದು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಹಿಂದೆ ಕೇಂದ್ರ ಸರ್ಕಾರ ಮಹಾನಗರ ಮತ್ತು ನಗರ ವ್ಯಾಪ್ತಿಗಳಲ್ಲಿ ಸಾಕಷ್ಟು ಸಂಖ್ಯೆಯ ಬಸ್‌ಗಳನ್ನು ಒದಗಿಸುತ್ತಿದ್ದರಿಂದ ಅಲ್ಲಿ ಬಳಸಿದ ಬಸ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಬಳಕೆಗೆ ನೀಡಲಾಗುತ್ತಿತ್ತು. ಆದರೀಗ ಕೇಂದ್ರ ಸರ್ಕಾರ ಬಸ್‌ಗಳನ್ನು ಮಹಾನಗರ ಮತ್ತು ನಗರಗಳಿಗೆ ಒದಗಿಸುತ್ತಿಲ್ಲ. ಪಟ್ಟಣ ಮತ್ತು ನಗರಗಳಿಗೆ ಯುಜಿಡಿಯಂಥ ಅನುದಾನವನ್ನೂ ನೀಡುತ್ತಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರದ ಅಸಹಕಾರದಿಂದ ಭಾರಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕದಲ್ಲಿ ಉದ್ಯಮಗಳು ಬಾರದೇ ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತಿಲ್ಲ. ರತನ್ ಟಾಟಾ ಅವರು ಎಂದಿಗೂ ವ್ಯಾಪಾರಸ್ಥರಾಗಿರದೇ ಉದ್ಯೋಗ ನೀಡಲು ಉದ್ಯಮ ಸ್ಥಾಪಿಸಿದ್ದರು. ಆದರೀಗ ಅನೇಕ ಉದ್ಯಮಿಗಳು ವ್ಯಾಪಾರಸ್ಥರಾಗಿದ್ದಾರೆ. ಅವರ ದೃಷ್ಟಿ ಕೇವಲ ಲಾಭ ಗಳಿಕೆಯಲ್ಲಿ ಮಾತ್ರ ಇರುವುದರಿಂದ ಉತ್ತರ ಕರ್ನಾಟಕ ಭಾಗ ಉದ್ಯಮಗಳಿಂದ ವಂಚಿತವಾಗಿದೆ. ಸೂಕ್ತ ಉತ್ತೇಜನ ನೀಡಿ ಉದ್ಯಮಗಳ ಸ್ಥಾಪನೆಗೆ ಕ್ರಮ ಕೈಗೊಂಡು ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವಂತೆ ಆಗ್ರಹಿಸಿದರು.