ಶಾಸಕ ಶಿವಲಿಂಗೇಗೌಡ, ಕೆಂಕೆರೆ ಗ್ರಾಮಸ್ಥರ ನಡುವೆ ವಾಗ್ವಾದ

| Published : Oct 14 2024, 01:20 AM IST

ಶಾಸಕ ಶಿವಲಿಂಗೇಗೌಡ, ಕೆಂಕೆರೆ ಗ್ರಾಮಸ್ಥರ ನಡುವೆ ವಾಗ್ವಾದ
Share this Article
  • FB
  • TW
  • Linkdin
  • Email

ಸಾರಾಂಶ

ಗಣಪತಿ ವಿಸರ್ಜನೆ ಅಂಗವಾಗಿ ಶನಿವಾರ ರಾತ್ರಿ ಕೆಂಕೆರೆ ಗ್ರಾಮದಲ್ಲಿ ಆರ್ಕೆಸ್ಟ್ರಾ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಬಂದಿದ್ದ ಸ್ಥಳೀಯ ಶಾಸಕ ಶಿವಲಿಂಗೇಗೌಡರು ವೇದಿಕೆ ಮೇಲೆ ಭಾಷಣ ಆರಂಭಿಸುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಕೆರೆಗೆ ನೀರು ತುಂಬಿಸುವ ಯೋಜನೆ ಏಕೆ ರದ್ದು ಮಾಡಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಿಂದ ಕೆರೆ ತುಂಬಿಸುವ ಯೋಜನೆ ರದ್ದು: ಗ್ರಾಮಸ್ಥರ ಆರೋಪ । ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರು । ಭಾಷಣ ಮೊಟಕುಗೊಳಿಸಿ ನಿರ್ಗಮನ

ಕನ್ನಪಡ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹೋಬಳಿ ಕೆಂಕೆರೆ ಗ್ರಾಮದ ಗ್ರಾಮಸ್ಥರು ಶನಿವಾರ ರಾತ್ರಿ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಘೆರಾವ್ ಹಾಕಿದ ಘಟನೆ ನಡೆಯಿತು. ಶಾಸಕರು, ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ನಡೆದ ಮಾತಿನ ಚಕಮಕಿಯಿಂದ ಶಾಸಕ ಶಿವಲಿಂಗೇಗೌಡರು ಭಾಷಣ ಮಾಡದೆ ವೇದಿಕೆಯಿಂದ ಹೊರ ನಡೆದರು.

ಗಣಪತಿ ವಿಸರ್ಜನೆ ಅಂಗವಾಗಿ ಶನಿವಾರ ರಾತ್ರಿ ಕೆಂಕೆರೆ ಗ್ರಾಮದಲ್ಲಿ ಆರ್ಕೆಸ್ಟ್ರಾ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಬಂದಿದ್ದ ಸ್ಥಳೀಯ ಶಾಸಕ ಶಿವಲಿಂಗೇಗೌಡರು ವೇದಿಕೆ ಮೇಲೆ ಭಾಷಣ ಆರಂಭಿಸುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಕೆರೆಗೆ ನೀರು ತುಂಬಿಸುವ ಯೋಜನೆ ಏಕೆ ರದ್ದು ಮಾಡಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ನದಿಯಿಂದ ಕೆಂಕೆರೆ ಗ್ರಾಮದ ಕೆರೆ ತುಂಬಿಸುವಂತೆ ಹಲವು ಬಾರಿ ಸಿಎಂ ಸಿದ್ದರಾಮಯ್ಯನವರನ್ನು ಕುರುಬರ ಸಂಘದ ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕೇಶವಮೂರ್ತಿ ಹಾಗೂ ಗ್ರಾಮಸ್ಥರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯನವರು 22 ಕೋಟಿ ರು. ಅನುದಾನವನ್ನು ಕೆರೆ ತುಂಬಿಸಲು ಮಂಜೂರು ಮಾಡಿದ್ದರು. ಆದರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಈ ಯೋಜನೆಯನ್ನು ರದ್ದು ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಕೇಶವಮೂರ್ತಿ, ಗ್ರಾಮಸ್ಥರ ನಡುವೆ ವೇದಿಕೆಯ ಮೇಲೆ ವಾಗ್ವಾದ ನಡೆದು ಕೆಲ ಗ್ರಾಮಸ್ಥರು ಶಾಸಕರನ್ನು ಏಕವಚನ ಹಾಗೂ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದರು. ಶಾಸಕರ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೊನೆಗೆ ಭಾಷಣ ಮೊಟಕುಗೊಳಿಸಿ ತಮ್ಮ ಬಗ್ಗೆ ಅವಾಚ್ಯವಾಗಿ ಮಾತನಾಡಿದವರ ವಿರುದ್ಧ ಹರಿಹಾಯ್ದ ಶಾಸಕ ಕೆ.ಎಂ.ಶಿವಲಿಂಗೇಗೌಡರು ವೇದಿಕೆಯಿಂದ ಇಳಿದು ಹೊರಟುಹೋದರು.