ಸಾರಾಂಶ
ಯಲಬುರ್ಗಾ: ವಿದ್ಯುತ್ ಕಂಬ ಅಳವಡಿಸುವ ಕಂಪನಿಯಿಂದ ಪರಿಹಾರ ನೀಡಿಕೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ರೈತರು ಹೋರಾಟ ನಡೆಸುತ್ತಿದ್ದು, ಶನಿವಾರ ಹೋರಾಟಗಾರರು ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ರೈತ ಮುಖಂಡ ಗುಂಗಾಡಿ ಶರಣಪ್ಪ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಕೋಳಿಹಾಳ ಗ್ರಾಮದ ರೈತರ ಜಮೀನಲ್ಲಿ ಖಾಸಗಿ ಕಂಪನಿ ವಿದ್ಯುತ್ ಕಂಬ ಅಳವಡಿಸುತ್ತಿದೆ. ಆದರೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯವಾಗಿದೆ ಎಂದು ಕಾಮಗಾರಿ ಸ್ಥಳದಲ್ಲಿ ರೈತರು ಹೋರಾಟ ನಡೆಸಿದ್ದಾರೆ.ತಾಲೂಕು ವ್ಯಾಪ್ತಿಯಲ್ಲಿ ರೈತರ ಜಮೀನಲ್ಲಿ ಅನಧಿಕೃತವಾಗಿ ಖಾಸಗಿ ಕಂಪನಿಯಿಂದ ವಿದ್ಯುತ್ ಕಂಬ ಅಳವಡಿಸಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೂ ಆಡಳಿತಯಂತ್ರ ಖಾಸಗಿ ಕಂಪನಿಗಳ ಪರ ಲಾಬಿ ಮಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ರೈತನ ವಿರುದ್ಧ ಪ್ರಕರಣ ದಾಖಲು: ತಾಲೂಕಿನ ಕೋಳಿಹಾಳ ಸೀಮಾದ ಸರ್ವೆ ನಂ. 109ರಲ್ಲಿ ನಿರ್ಮಿಸಿದ್ದ 220 ಕೆವಿ ವಿದ್ಯುತ್ ಕಂಬಕ್ಕೆ ಲೈನ್ ಎಳೆಯುವ ವೇಳೆ ಗುಂಗಾಡಿ ಶರಣಪ್ಪ ಹಾಗೂ ಇತರ ಐದಾರು ಜನರು ಅಡ್ಡಿಪಡಿಸಿದ್ದಾರೆ ಎಂದು ಸೆರೆಂಟಿಕಾ ಕಂಪನಿ ಅಧಿಕಾರಿ ಬೇವೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.ಜು. 26ರಂದು ಏಕಾಏಕಿಯಾಗಿ ಬಂದು ಪ್ರತಿ ಕಂಬಕ್ಕೆ ₹50 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಅಲ್ಲದೆ ಶರಣಪ್ಪ ಗುಂಗಾಡಿ ಫೇಸ್‌ಬುಕ್ ಖಾತೆಯಲ್ಲಿ ದ್ವೇಷ ಹರಡುವ ಸುಳ್ಳು ಆಪಾದನೆ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಬೇವೂರು ಠಾಣೆಯಲ್ಲಿ ಜೂ. 6ರಂದು ಪ್ರಕರಣ ದಾಖಲಾಗಿದೆ. ಜೂ. 29ರಂದು ವಿದ್ಯುತ್ ಲೈನ್ ಕಾಮಗಾರಿ ಸ್ಥಳದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಪ್ರಕರಣ ದಾಖಲಾಗಿದೆ. ಹೀಗೆ ಅವರು ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.