ಸಾರಾಂಶ
ನ.26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಆರಂಭಗೊಂಡು 11 ಗಂಟೆಯ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.
ಕನ್ನಡಪ್ರಭವಾರ್ತೆ ಪುತ್ತೂರು
ತಾಲೂಕಿನ ಅರಿಯಡ್ಕ, ಕೆದಂಬಾಡಿ ಗ್ರಾ. ಪಂ. ಗಳಲ್ಲಿ ಸದಸ್ಯರ ನಿಧನದಿಂದ ತೆರವಾದ ತಲಾ ಒಂದು ಸ್ಥಾನಗಳಿಗೆ ನ.23ರಂದು ಶನಿವಾರ ಶಾಂತಿಯುತ ಚುನಾವಣೆ ಪ್ರಕ್ರಿಯೆ ನಡೆಯಿತು. ಅರಿಯಡ್ಕದಲ್ಲಿ ಶೇ. 78. 73 ಮತ್ತು ಕೆದಂಬಾಡಿಯಲ್ಲಿ ಶೇ. 48. 21 ಮತದಾನವಾಗಿದೆ. ಅರಿಯಡ್ಕ ಗ್ರಾ.ಪಂ. ನ ಮಾಡ್ನೂರು 2ನೇ ವಾರ್ಡ್ನಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನದಲ್ಲಿ ಚುನಾಯಿತರಾಗಿದ್ದ ಶಂಕರ ಮಾಡಂದೂರು ಹಾಗೂ ಕೆದಂಬಾಡಿ ಗ್ರಾ.ಪಂ. ನ ವಾರ್ಡ್ 4 ರಲ್ಲಿ ಸಾಮಾನ್ಯ ಮೀಸಲು ಸ್ಥಾನದಲ್ಲಿ ಚುನಾಯಿತರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅರಿಯಡ್ಕ ಗ್ರಾ.ಪಂ.ನ ಮಾಡ್ನೂರು 2ನೇ ವಾರ್ಡ್ನಲ್ಲಿ ಒಟ್ಟು 1, 537 ಮತದಾರರಿಗೆ ಎರಡು ಮತಗಟ್ಟೆಗಳಾಗಿ ವಿಂಗಡಿಸಲಾಗಿತ್ತು. ಮತಗಟ್ಟೆ ಸಂಖ್ಯೆ 92 ರ ಕಾವು ಸಮುದಾಯ ಭವನದಲ್ಲಿ ಒಟ್ಟು 813 ಮತದಾರರು ಹಾಗೂ ಮತಗಟ್ಟೆ ಸಂಖ್ಯೆ 92 ಎ ಮಾಡನ್ನೂರು ಹಿ.ಪ್ರಾ. ಶಾಲಾ ಮತಗಟ್ಟೆಯಲ್ಲಿ ಒಟ್ಟು 726 ಮಂದಿ ಮತದಾರರಿದ್ದರು. ಈ ಪೈಕಿ ಒಟ್ಟು 405 ಪುರುಷರು, 337 ಮಹಿಳೆಯರು ಸೇರಿದಂತೆ ಒಟ್ಟು 742 ಮಂದಿ ಮತ ಚಲಾಯಿಸಿದ್ದಾರೆ. ಕೆದಂಬಾಡಿ ವಾರ್ಡ್ನ 4ರಲ್ಲಿ ಪುರುಷರು 398 , ಮಹಿಳೆಯರು 404 ಸೇರಿದಂತೆ ಒಟ್ಟು 802 ಮತದಾರರಿದ್ದು, ಈ ಪೈಕಿ 297 ಪುರುಷರು, 336 ಮಹಿಳೆಯರು ಸೇರಿದಂತೆ ಒಟ್ಟು 633 ಮಂದಿ ಮತ ಚಲಾವಣೆ ಮಾಡಿದ್ದಾರೆ. ತಿಂಗಳಾಡಿ ಹಿ.ಪ್ರಾ. ಶಾಲೆಯಲ್ಲಿ ಮತದಾನ ನಡೆಯಿತು. ಕೆದಂಬಾಡಿಯಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆಯಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಮೋಹನ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋ, ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ ಕಣದಲ್ಲಿದ್ದಾರೆ. ಅರಿಯಡ್ಕ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಎ.ಕೆ. ಮಾಡ್ನೂರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಕುಮಾರ ಕಣದಲ್ಲಿದ್ದಾರೆ. ನ.26 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಆರಂಭಗೊಂಡು 11 ಗಂಟೆಯ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.