ಸಾರಾಂಶ
ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ತಾಳಗುಪ್ಪತಾಳಗುಪ್ಪ-ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿ, ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿದೆ. ದೂರದೂರುಗಳಿಂದ ಬರುತ್ತಿರುವ ಪ್ರವಾಸಿಗರ ದಂಡು ಜಲಪಾತದ ಸಹಜ ನಯನ ಮೋಹಕ ಸೌಂದರ್ಯವನ್ನು ಆಸ್ವಾದಿಸಿ ತೃಪ್ತವಾಗಲು ಧಾವಿಸುತ್ತಿದೆ.
ಅದ್ಭುತ ಸೃಷ್ಟಿಸಿದ ಶರಾವತಿ:ಪ್ರಕೃತಿಯ ಅದ್ಭುತಗಳಲ್ಲೊಂದಾದ ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ತೀರ್ಥಹಳ್ಳಿ ಸಮೀಪದ ಅಂಬುತೀರ್ಥದಲ್ಲಿ ರಾಮನ ಬಾಣದಿಂದ ಉಗಮವಾಯಿತು ಎಂಬ ನಂಬಿಕೆ ಜನಜನಿತವಾಗಿರುವ ಶರಾವತಿ ಕೇವಲ 82 ಮೈಲು ( 132 ಕಿ.ಮೀ.) ಉದ್ದ ಹರಿದು ಹೊನ್ನಾವರ ಸಮೀಪದ ಅರಬ್ಬೀ ಸಮುದ್ರದಲ್ಲಿ ಲೀನವಾಗುತ್ತದೆ. ಅಂಬುತೀರ್ಥದಿಂದ ಸುಮಾರು 32 ಕಿಮಿ ಸಣ್ಣ ಹಳ್ಳವಾಗಿ ಹರಿಯುವ ಶರಾವತಿ ನಂತರ 12 ಉಪನದಿಗಳನ್ನು ಒಡಲಲ್ಲಿ ತುಂಬಿಕೊಂಡು ನದಿಯಾಗುತ್ತದೆ. ತನ್ನ ಹರಿವಿನ ಸುಮಾರು 95 ಕಿ.ಮೀ.(60 ಮೈಲು)ನಲ್ಲಿ 830 ಅಡಿ ಆಳದ ಕಣಿವೆಗೆ ನಾಲ್ಕು ಧಾರೆಗಳಾಗಿ ಧುಮುಕಿ ಜಲಪಾತವಾಗಿದೆ. ಅದನ್ನು ಗೇರುಸೊಪ್ಪ ಜಲಪಾತ ಎಂದು ದಾಖಲಿಸಲಾಗಿತ್ತು.
ವಿಶ್ವ ಸುಂದರಿ:ಶ್ರೀಮದ್ಘಾಂಭೀರ್ಯದಿಂದ ಧೀಮಂತ ಧಾರೆಯಾಗಿ, ಧುಮ್ಮಿಕ್ಕುವ ರಾಜ, ಭೋರ್ಗರೆದು ಉಕ್ಕುವ ರೋರರ್, ನೆಲದಿಂದ ಆಕಾಶಕ್ಕೆ ಚಿಮ್ಮುವಂತೆ ಕಾಣುವ ರಾಕೆಟ್, ವನಪು ಒಯ್ಯಾರದಿಂದ ಬಳುಕಿ ತುಳುಕುವ ರಾಣಿ ಹೀಗೆ ನಾಲ್ಕು ಧಾರೆಗಳಾಗಿ ಕಣಿವೆಗೆ ಕುಪ್ಪಳಿಸುವ ಶರಾವತಿ ಧೀರ, ಗಂಭೀರ, ರುದ್ರರಮಣೀಯ ಸೌಂದರ್ಯವನ್ನು ನೀಡಿದೆ.
ಕವಿಗಳಿಗೆ ಸ್ಪೂರ್ತಿ:ಎತ್ತರ, ಗಾತ್ರ ಮತ್ತು ಸೌಂದರ್ಯ ಮೂರರಲ್ಲಿಯೂ ವಿಶ್ವ ಮಟ್ಟದ ಜಲಪಾತಗಳಿಗೆ ಸರಿಸಾಟಿಯಾದ ಅಥವಾ ಅದಕ್ಕೂ ಮೀರಿಸಿದ್ದು ಜೋಗ ಜಲಪಾತ. ಜೋಗ ಜಲಪಾತ ಪ್ರಪಂಚದಲ್ಲಿಯೇ ಸುಂದರವಾದುದು ಎಂದು ಮೈಸೂರ್ ಗೆಜೆಟಿಯರ್‌ನಲ್ಲಿ ಲೆವಿಸ್ ಎಂಬುವವರ ವರ್ಣನೆ ದಾಖಲಾಗಿದೆ. ಜೋಗಕ್ಕೆ ಬಂದು, ಇಲ್ಲಿನ ನಿಸರ್ಗ ವೈಭವಕ್ಕೆ ಮನಸೋತ ವಿಶ್ವಕವಿ ರವೀಂದ್ರ ಠಾಕೂರ್, ದ. ರಾ. ಬೇಂದ್ರೆ, ಮೊದಲಾದ ಶ್ರೇಷ್ಠರು, ಲಾವಣಿಕಾರರು, ಜನಪದ ಕವಿಗಳು, ಕಲಾವಿದರು, ಸಾಹಿತಿಗಳು, ದೇಶ ವಿದೇಶದ ಪ್ರವಾಸಿಗಳು ಜೋಗ ಜಲಪಾತವನ್ನು ನೋಡುವುದೇ ಒಂದು ಅಧ್ಭುತ ಅನುಭವ ಎಂದು ಹಾಡಿ ಹೊಗಳಿದ್ದಾರೆ.
ವರ್ಷವಿಡೀ ಭೋರ್ಗರೆಯುತ್ತಿದ್ದ ಶರಾವತಿ:ಶರಾವತಿ ಜಲವಿದ್ಯುತ್ ಯೋಜನೆಗಿಂತ ಪೂರ್ವದಲ್ಲಿ ಜೋಗ ಜಲಪಾತ ವರ್ಷದ ಎಲ್ಲಾ ದಿನಗಳಲ್ಲಿಯೂ ಸೌಂದರ್ಯ ಹಂಚುತ್ತಿತ್ತು. ಮಳೆಗಾಲದಲ್ಲಿ ನಾಲ್ಕು ಧಾರೆಗಳು ಒಂದಾಗಿ ಧುಮ್ಮಿಕ್ಕಿ, ಸೌಂದರ್ಯದ ಜೊತೆಗೆ ಭಯವನ್ನು ಹುಟ್ಟಿಸುತ್ತಿತ್ತು. ಅದರ ಶಬ್ಧ ನಾಲ್ಕಾರು ಮೈಲುಗಳವರೆಗೂ ಕೇಳುತ್ತಿತ್ತು ಎಂದು ಹಿರಿಯರು ನೆನಪಿಸುತ್ತಾರೆ.
ವಿದೇಶಿ ಹೆಸರುಗಳು:ಜಲಪಾತದ ನಾಲ್ಕು ಧಾರೆಗಳ ಹೆಸರಿನಲ್ಲಿ ಮೊದಲ ಧಾರೆ ರಾಜ ಬಿಟ್ಟರೆ ಉಳಿದವು ವಿದೇಶಿ ಹೆಸರು ಪಡೆದಿದೆ. ಇಲ್ಲಿಗೆ ಬರುತ್ತಿದ್ದ ಪ್ರವಾಸಿಗರು ಹಲವು ಸ್ಥಳಗಳಲ್ಲಿ ನಿಂತು ಜಲಪಾತದ ಚೆಲುವನ್ನು ಆಸ್ವಾದಿಸುತ್ತಿದ್ದರು. ಪಾಕೃತಿಕ ಚೆಲುವು ತಮಗೆ ನೀಡಿದ ಆನಂದವನ್ನು ವರ್ಣಿಸುತ್ತಾ ಹೆಸರಿಡ ತೊಡಗುತ್ತಾ ಬಂದರು. ಈ ಹೆಸರುಗಳೇ ಸ್ಥಿರವಾಯಿತು.
ಯರೋಪಿಯನ್ ಸಂದರ್ಶಕರಿಗೆ ರಾಜ ಹೆಸರು ಪರಿಚಿತವಾದ ಕಾರಣದಿಂದ ಮೊದಲ ಧಾರೆಗೆ ರಾಜ ಎಂಬ ಹೆಸರು. ಇನ್ನುಳಿದ ದಾರೆಗಳಿಗೆ ರೋರರ್, ರಾಕೆಟ್ ಹೆಸರುಗಳು. ನಾಲ್ಕನೆ ಜಲಧಾರೆಯನ್ನು ಹೆಣ್ಣಾಗಿ ಗುರುತಿಸಿದ ಸಂದರ್ಶಕರು ಅದಕ್ಕೆ ಲಾ ಡೇ ಬ್ಲಾಂಚಿ ಎಂದು ಹೆಸರಿಟ್ಟು, ಬಿಳಿಯ ಬಟ್ಟೆಯಲ್ಲಿ ಸಿಂಗರಿಸಿದ ಕ್ರಿಶ್ಚಿಯನ್ ವಧು ಎನ್ನುವಂತೆ ವರ್ಣಿಸಿದ್ದಾರೆ. ಬ್ರಿಟೀಷರು 1841ರಲ್ಲಿ ನಿರ್ಮಿಸಿದ ಪ್ರವಾಸಿ ಬಂಗಲೆಯಲ್ಲಿ (ಬ್ರಿಟೀಷ್ ಬಂಗಲೆ) 1878 ರಿಂದಲೂ ಇರುವ ಸಂದರ್ಶಕ ಪುಸ್ತಕವನ್ನು ಆಧರಿಸಿ, ಡಾ.ಗಜಾನನ ಶರ್ಮ ತಮ್ಮ ಬೆಳಕಾಯಿತು ಕರ್ನಾಟಕ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.