ಸಾರಾಂಶ
- ಚನ್ನಗಿರಿ ಶಾಸಕರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತೋರಿಸಲಿ: ಅಹಿಂದ ಚೇತನ ಮುಖಂಡರ ಸವಾಲು
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಅಹಿಂದ ವರ್ಗದ ಮುಖ್ಯಮಂತ್ರಿಯನ್ನು ಒಂದು ವೇಳೆ ಬದಲಾವಣೆ ಮಾಡಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಹಿಂದ ಚೇತನ ಸಂಘಟನೆ ರಾಜ್ಯ ಘಟಕ ಎಚ್ಚರಿಸಿದೆ.ದೇಶಕ್ಕೆ ಸ್ವಾತಂತ್ರ್ಯ ಬಂದ 78 ವರ್ಷದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ-ದಲಿತ ವರ್ಗಗಳನ್ನು ಪ್ರತಿನಿಧಿಸುತ್ತಿರುವವರು ಎಷ್ಟು ಜನ ಮುಖ್ಯಮಂತ್ರಿ ಆಗಿದ್ದಾರೆ? ಎಸ್.ಬಂಗಾರಪ್ಪ 2 ವರ್ಷ, ಡಾ.ವೀರಪ್ಪ ಮೊಯ್ಲಿ 2 ವರ್ಷ ಸಿಎಂ ಆಗಿದ್ದರು. ಸಿದ್ದರಾಮಯ್ಯ ಯಶಸ್ವಿಯಾಗಿ 5 ವರ್ಷ ಸಿಎಂ ಆಗಿ, 2023ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ಇಂಥವರ ಬದಲಾವಣೆಗೆ ಮುಂದಾದರೆ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೆ ಧಕ್ಕೆ ಮಾಡಿಕೊಳ್ಳಲಿದೆ ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಗೆ ಕೂಗು ಹಾಕುತ್ತಿರುವ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರನಾಗಿ ನಿಂತು ಸ್ಪರ್ಧಿಸಿ, ತೋರಿಸಲಿ. ಒಂದುವೇಳೆ ಗೆದ್ದು ಬಂದರೆ ಮುಖ್ಯಮಂತ್ರಿ ಬದಲಾವಣೆಯ ಕೂಗು ಹಾಕಲಿ. ರಾಜ್ಯದಲ್ಲಿ ಶೇ.80ರಷ್ಟು ಅಹಿಂದ ವರ್ಗಗಳ ಮತಗಳಿವೆ. ಅದನ್ನು ಓಟು ಬ್ಯಾಂಕ್ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಶೇ.20ರಷ್ಟಿರುವ ಸಮುದಾಯಗಳಿಗೆ ರಾಜ್ಯದ ಆಡಳಿತ ಚುಕ್ಕಾಣಿ ನೀಡುತ್ತಾ ಬಂದಿವೆ. 2023ರಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸಿಕ್ಕಿದೆ. ಸಿಎಂ ಆಗಿ ಮುಂದುವರಿಯಲು ಅವಕಾಶ ನೀಡಬೇಕಾದವರು ಸರ್ಕಾರಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ಬಹಿರಂಗವಾಗಿ ಡಿ.ಕೆ.ಶಿವಕುಮಾರರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಒತ್ತಾಯಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಇಡೀ ರಾಜ್ಯದಲ್ಲಿ ಶೇ.80ರಷ್ಟು ಅಹಿಂದ ವರ್ಗಗಳಿದ್ದರೂ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಶೇ.20ರಷ್ಟು ಇರುವವರಿಗೆ ಅಧಿಕಾರ, ಅವಕಾಶಗಳು ಪಾಲಾಗುತ್ತಿವೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಅಹಿಂದ ವರ್ಗಗಳಿಗೆ ಬೆರಳೆಣಿಕೆಯಷ್ಟು ಅವಕಾಶಗಳನ್ನು ಮಾತ್ರ ನೀಡಲಾಗಿತ್ತು. ಅಲ್ಲಿಯೂ ಅವಕಾಶಗಳನ್ನು ಕಸಿದುಕೊಂಡು, ಈಗ ಮುಖ್ಯಮಂತ್ರಿ ಸ್ಥಾನವನ್ನೂ ಬಿಟ್ಟು ಕೊಡುವಂತೆ ಕೇಳುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸಿಎಂ ಸಿದ್ದರಾಮಯ್ಯ ಬದಲಾವಣೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈಗ ಸ್ವಾಮೀಜಿಗಳ ಬಹಿರಂಗ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದಾರೆ. ಚನ್ನಗಿರಿ ಅಹಿಂದ ವರ್ಗಗಳು 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರಿಂದಲೇ ಗೆದ್ದಿದ್ದನ್ನು ಮರೆತಂತಿದೆ ಎಂದು ಟೀಕಿಸಿದ್ದಾರೆ.ಮುಂದಿನ 4 ವರ್ಷಗಳ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಒಂದು ವೇಳೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಅದಕ್ಕೆ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ, ಜಿಲ್ಲಾಧ್ಯಕ್ಷ ಚಂದ್ರು ದೀಟೂರು, ಮುಖಂಡರಾದ ಎಸ್.ಎಂ.ಸಿದ್ದಲಿಂಗಪ್ಪ, ಪರ್ವೇಜ್ ಹುಸೇನ್, ಹಸನ್ ಬಾಬು, ಸಕ್ರ್ಯಾ ನಾಯ್ಕ ತಿಳಿಸಿದ್ದಾರೆ.
- - -ಕೋಟ್ ಮುಖ್ಯಮಂತ್ರಿ ವಿಷಯವಾಗಲೀ ಮತ್ತೆ ಯಾವುದೇ ವಿಷಯವಾಗಲಿ ತಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಿ. ಅದನ್ನು ಬಿಟ್ಟು, ಅಹಿಂದ ವರ್ಗಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿ ಬಗ್ಗೆ ಪ್ರಸ್ತಾಪಿಸುತ್ತಿರುವುದು ಇಂತಹ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯ- ಮುಖಂಡರು, ಅಹಿಂದ ಚೇತನ ಸಂಘಟನೆ