ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ದೇವಾಲಯದ ಸುತ್ತಮುತ್ತ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಜತೆಗೆ ದೇವಾಲಯದ ಸುತ್ತ ದೀಪಾಲಂಕಾರವನ್ನು ಪುರಸಭೆ ವತಿಯಿಂದ ಮಾಡಬೇಕು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಹೊರ ವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ರಥೋತ್ಸವವನ್ನು ಜ. 25ರ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ದೇವಾಲಯದ ಆವರಣದಲ್ಲಿ ನಡೆದ ಬ್ರಹ್ಮರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ತಿಂಗಳ 19 ರಿಂದ ಜಾತ್ರೆ ಪ್ರಾರಂಭವಾಗಿ 30ಕ್ಕೆ ಕೊನೆಯಾಗಲಿದೆ ಎಂದು ತಿಳಿಸಿದರು.
ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ದೇವಾಲಯದ ಸುತ್ತಮುತ್ತ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಜತೆಗೆ ದೇವಾಲಯದ ಸುತ್ತ ದೀಪಾಲಂಕಾರವನ್ನು ಪುರಸಭೆ ವತಿಯಿಂದ ಮಾಡಬೇಕು ಎಂದರು.ಇದರೊಂದಿಗೆ ಆದಿಶಕ್ತಿ ತೋಪಮ್ಮನವರ ದೇವಾಲಯದಿಂದ ಪಟ್ಟಣದ ಪ್ರಮುಖ ರಸ್ತೆ ಮತ್ತು ವೃತ್ತ ಸೇರಿದಂತೆ ದೇವಾಲಯದವರಿಗೆ ವಿದ್ಯುತ್ ದೀಪಾಲಂಕಾರವನ್ನು ಸೆಸ್ಕ್ ನವರು ಮಾಡಿಸಬೇಕೆಂದು ತಿಳಿಸಿದರು.
19 ರಿಂದ ಪ್ರಾರಂಭವಾಗುವ ಜಾತ್ರೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡುವುದರ ಜತೆಗೆ ಅಗತ್ಯವಿದ್ದರೆ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿ ಎಂದು ಸಲಹೆ ನೀಡಿದರು.ಸಾರಿಗೆ ಸಂಸ್ಥೆಯವರು ಬಸ್ ನಿಲ್ದಾಣದಿಂದ ದೇವಾಲಯದವರಿಗೆ ನಿರಂತರವಾಗಿ ಬಸ್ ಸಂಚರಿಸುತ್ತಿರಬೇಕೆಂದು ಕಟ್ಟಪ್ಪಣೆ ಮಾಡಿದರು. ಪ್ರತಿದಿನ ದೇವಾಲಯದಲ್ಲಿ ನಡೆಯುವ ಪೂಜಾ ಪುರಸ್ಕಾರಗಳನ್ನು ಹಿಂದಿನ ಪದ್ದತಿಯಂತೆ ಮಾಡಲು ಭಕ್ತಾದಿಗಳಿಗೆ ಮನವಿ ಮಾಡುವಂತೆ ಪಾರುಪತ್ತೇದಾರರಿಗೆ ಸೂಚಿಸಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ತಹಸಿಲ್ದಾರ್ ಜಿ. ಸುರೇಂದ್ರ ಮೂರ್ತಿ, ಇಓ ವಿ.ಪಿ. ಕುಲದೀಪ್ ಮಾತನಾಡಿದರು. ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.---------------