ಸಾರಾಂಶ
ಬೆಟಗೇರಿ 110 ಕೆವಿ ಸ್ಟೇಷನ್ ಎದುರು ಪ್ರತಿಭಟನೆ
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಕನ್ನಡಪ್ರಭ ವಾರ್ತೆ ಕೊಪ್ಪಳ
ಇಡೀ ನಾಡೇ ದಸರಾ ಹಬ್ಬ, ವಿಜಯ ದಶಮಿಯ ಸಂಭ್ರಮದಲ್ಲಿದ್ದರೆ ಅನ್ನದಾತರು ಮಾತ್ರ ವಿದ್ಯುತ್ ಸಮಸ್ಯೆಯಿಂದ ರೋಸಿ ಹೋಗಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ 110 ಕೆವಿ ಸ್ಟೇಷನ್ ಎದುರು ಕಾತರಕಿ, ಗುಡ್ಲಾನೂರು ರೈತರು ಮಂಗಳವಾರ ದಸರಾ ಹಬ್ಬ ಆಚರಿಸುವುದನ್ನು ಬಿಟ್ಟು, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಪ್ರತಿಭಟನೆ ನಡೆಸಿದರು.
ಹೊಲದಿಂದ ನೇರವಾಗಿ ಏಕಾಏಕಿ ಬೆಟಗೇರಿ 110 ಕೆವಿ ಸ್ಟೇಷನ ಬಳಿಗೆ ಬಂದು ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಕೊಡುವುದೇ ಐದು ಗಂಟೆ. ಅದನ್ನು ಸಹ ಸರಿಯಾಗಿ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ರೈತರು, ಪದೇ ಪದೆ ವಿದ್ಯುತ್ ಕಡಿತ ಮಾಡಿದರೆ, ಲೋಡಶೆಡ್ಡಿಂಗ್ ಮಾಡಿದರೆ ನಮ್ಮ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.ನೀವು ಕೊಡುತ್ತಿರುವ ಕಳಪೆ ಮಟ್ಟದ ವಿದ್ಯುತ್ತಿನಿಂದಾಗಿ ಪಂಪಸೆಟ್ ಗಳು ಸುಡುತ್ತಿವೆ. ವಿದ್ಯುತ ಕೊರತೆಯಿಂದ ಹೊಲದಲ್ಲಿ ಬೆಳೆಗಳು ಒಣಗುತ್ತಿವೆ. ಹೀಗಾದರೆ ನಾವು ಜೀವನ ಮಾಡುವುದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.
ಶಾಸಕರ ಭೇಟಿ:ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ರೈತರು ಪ್ರತಿಭಟನೆ ಮಾಡುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ.
ರೈತರು ಶಾಸಕ ರಾಘವೇಂದ್ರ ಹಿಟ್ನಾಳ ಎದುದು ತಮ್ಮ ಅಳಲು ತೋಡಿಕೊಂಡರು. ಇಂತಹ ವಿದ್ಯುತ್‌ನಿಂದ ನಾವು ಬೆಳೆ ತೆಗೆಯಲು ಸಾಧ್ಯವಿಲ್ಲ. ಐದು ಗಂಟೆ ವಿದ್ಯುತ್‌ನ್ನು ಸಮರ್ಪಕವಾಗಿ ನೆಟ್ಟಗೆ ಕೊಡದಿದ್ದರೆ ಹೇಗೆ ಬೆಳೆ ಕಾಪಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಅಹವಾಲು ಆಲಿಸಿದ ಶಾಸಕ ರಾಘವೇಂದ್ರ ಹಿಟ್ನಾಳ, ತಕ್ಷಣ ಜೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಐದು ಗಂಟೆಯಾದರೂ ಸಮರ್ಪಕವಾಗಿ ವಿದ್ಯುತ್ ನೀಡದಿದ್ದರೆ ಹೇಗೆ, ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾದರೇ ಸಹಿಸಿಕೊಳ್ಳುವುದಿಲ್ಲ, ಏನಾದರೂ ತೊಂದರೆ ಇದ್ದರೇ ಸರಿಪಡಿಸಿ, ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಎಂದು ತಾಕೀತು ಮಾಡಿದರು. ಅಧಿಕಾರಿಗಳು ಸಹ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಲ್ಲಪ್ಪ ಅಂಗಡಿ, ಮಂಜುನಾಥ ಮಾಲಿಪಾಟೀಲ್, ರವಿ ಸಕ್ರಳ್ಳಿ, ಶರಣಪ್ಪ ಉಳ್ಳಾಗಡ್ಡಿ, ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ನೀರಲಗಿ, ಬೆಟಗೇರಿ, ಕಾತರಕಿ, ಗುಡ್ಲಾನೂರು ಗ್ರಾಮಗಳ ಅನೇಕ ರೈತರು ಇದ್ದರು.24ಕೆಪಿಎಲ್22
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮ 110 ಕೆವಿ ಸ್ಟೇಷನ್ ಎದುರು ಕಾತರಕಿ,ಗುಡ್ಲಾನೂರು ರೈತರು ಪ್ರತಿಭಟನೆ ನಡೆಸಿದರು.24ಕೆಪಿಎಲ್23
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ 110 ಕೆವಿ ಸ್ಟೇಷನ್ ಎದುರು ರೈತರು ಪ್ರತಿಭಟನೆ ನಡೆಸಿದರು.