ಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಮಠಗಳು

| Published : Aug 06 2024, 12:38 AM IST

ಸಾರಾಂಶ

ಮಠಗಳು ಮತ್ತು ಸಮಾಜ ಒಂದಕ್ಕೊಂದು ಪೂರಕವಾದವು. ಯಾವುದೇ ಬೇಧ-ಭಾವಗಳಿಲ್ಲದೆ ಎಲ್ಲರಿಗೂ ಮಠಗಳು ಸೇವೆಯನ್ನು ಸಲ್ಲಿಸುತ್ತಿವೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಸಮಾಜದ ಏಳಿಗೆಗಾಗಿ ಮಠಗಳು ತ್ರಿವಿಧ ದಾಸೋಹದ ಮೂಲಕ ನಿರಂತರವಾಗಿ ಶ್ರಮಿಸುತ್ತಿವೆ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಸೂರಹಳ್ಳಿ ಶ್ರೀ ವಿರಕ್ತಮಠದ ಶ್ರೀ ನಾಗಭೂಷಣ ಸ್ವಾಮಿಗಳವರ ಪುಣ್ಯಾರಾಧನೆಯ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠಗಳು ಮತ್ತು ಸಮಾಜ ಒಂದಕ್ಕೊಂದು ಪೂರಕವಾದವು. ಯಾವುದೇ ಬೇಧ-ಭಾವಗಳಿಲ್ಲದೆ ಎಲ್ಲರಿಗೂ ಮಠಗಳು ಸೇವೆಯನ್ನು ಸಲ್ಲಿಸುತ್ತಿವೆ. ನಾಗಭೂಷಣ ಸ್ವಾಮಿಗಳು ಪೂಜಾ ನಿಷ್ಠರಾಗಿದ್ದರು. ಆಧ್ಯಾತ್ಮಿಕ ಚಿಂತನೆಗಳಲ್ಲಿ ಅತೀವ ಒಲವುಳ್ಳವರಾಗಿದ್ದರು.ಅವರ ಉತ್ತರಾಧಿಕಾರಿಗಳಾಗಿರುವ ಶ್ರೀ ಕೆಂಡಗಣ್ಣ ಸ್ವಾಮಿಗಳು ಕ್ರಿಯಾಶೀಲರು. ಜೆಎಸ್ಎಸ್ ಗುರುಕುಲದಲ್ಲಿದ್ದ ಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಅವರ ಹಿರಿಯ ಶ್ರೀಗಳಂತೆ ಮಠದ ಎಲ್ಲ ಕಾರ್ಯಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲೆಂದು ತಿಳಿಸಿದರು.

ದೇವನೂರು ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸೂರಹಳ್ಳಿ ಶ್ರೀಗಳು ಸರಿಯಾದ ಮಾರ್ಗದಲ್ಲಿ ನಡೆದವರು. ಸಮಾಜದ ಬಗ್ಗೆ ಅತೀವವಾದ ನಿಷ್ಠೆಯನ್ನು ಹೊಂದಿದ್ದವರು. ದಾಸೋಹದಲ್ಲೇ ಭಗವಂತನನ್ನು ಕಂಡವರು ಎಂದರು.

ಹುಲ್ಲಹಳ್ಳಿ ಶ್ರೀ ವಿರಕ್ತಮಠದ ಶ್ರೀ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸೂರಹಳ್ಳಿ ಶ್ರೀಗಳು ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದವರು. ನಮ್ಮ ಹಿರಿಯ ಗುರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರೆಂದು ತಿಳಿಸಿದರು. ಗೌಡಹಳ್ಳಿ ಶ್ರೀ ಮರಿತೋಂಟದಾರ್ಯ ಸೂರಹಳ್ಳಿ ಶ್ರೀಗಳು ಗಟ್ಟಿತನದ ವ್ಯಕ್ತಿತ್ವ ಹೊಂದಿದ್ದ ಸ್ವಾಭಿಮಾನಿಗಳು. ಏನೇ ಕಷ್ಟ-ನಷ್ಟಗಳಾದರೂ ಸಮಭಾವದಿಂದ ಸ್ವೀಕರಿಸಿ ಶ್ರೀಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು ಎಂದರು.

ಶಿರಮಳ್ಳಿ ಶ್ರೀ ಮುರಘೀ ಸ್ವಾಮಿ ಮಠದ ಶ್ರೀ ಇಮ್ಮಡಿ ಮುರಘೀ ಸ್ವಾಮೀಜಿ, ಗುರುವು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರುವ ಪರುಷ ಮಣಿ ಇದ್ದಂತೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನುಡಿಯಂತೆ ಗುರುವಿಗೆ ಶರಣಾದರೆ ಉತ್ತಮ ಮಾರ್ಗ ದೊರೆಯುತ್ತದೆ ಎಂದು ಹೇಳಿದರು.

ಕಂತೆ ಮಾದಪ್ಪನ ಬೆಟ್ಟದ ಶ್ರೀಗಳು ಶ್ರೀಗಳನ್ನು ಸ್ಮರಿಸಿದರು.

ಕಿರಿಯ ಶ್ರೀಗಳಾದ ಶ್ರೀ ಕೆಂಡಗಣ್ಣ ಸ್ವಾಮೀಜಿ ನಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ಮಠದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಲಹೆ ಮತ್ತು ಸಹಕಾರ ಅಗತ್ಯ ಎಂದರು.

ಕಸುವಿನಹಳ್ಳಿಯ ಶಿವಮೂರ್ತಿ, ರಾಂಪುರದ ಪಟೇಲ್ ಮಹದೇವಪ್ಪ, ಸೂರಹಳ್ಳಿ ಕೆಂಪರಾಜು, ಸೂರಹಳ್ಳಿ ವೀರಭದ್ರಸ್ವಾಮಿ, ರಮೇಶ್, ಚುಂಚನಹಳ್ಳಿ ಮಂಗಳ ಮಹದೇವಪ್ಪ, ಬೆಟ್ಟದಮಾದಹಳ್ಳಿ ಪ್ರಭುಸ್ವಾಮಿ, ಲಕ್ಷಣಾಪುರ ಚಿನ್ನಸ್ವಾಮಪ್ಪ, ಬಿಳುಗಲಿ ಗೀತಾ ಶಿವಪ್ಪದೇವರು ಮಾತನಾಡಿ, ಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಈ ಭಾಗದ ಭಕ್ತರನ್ನು ಜಾಗೃತಗೊಳಿಸುವ ಕಾಯಕದಲ್ಲಿ ನಿರತರಾಗಿದ್ದರು. ಕಿರಿಯ ಶ್ರೀಗಳಿಗೂ ಮಠವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ನಾವೆಲ್ಲರೂ ಸಹಕಾರ ನೀಡುತ್ತೇವೆ. ಶ್ರೀಗಳು ಸದಾ ಭಕ್ತರ ಬಗ್ಗೆ ಯೋಚಿಸುತ್ತಿದ್ದರು. ಮಠವನ್ನು ಶಕ್ತಿಮೀರಿ ಬೆಳೆಸಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಚಿಕ್ಕತುಪ್ಪೂರು ಶ್ರೀಗಳು ಪ್ರಾರ್ಥಿಸಿ, ಸ್ವಾಗತಿಸಿದರು. ಶಿರಮಳ್ಳಿ ಶ್ರೀಗಳು ವಂದಿಸಿದರು. ಚುಂಚನಹಳ್ಳಿ ಶ್ರೀಗಳು ಶ್ರೀಗಳ ವ್ಯಕ್ತಿತ್ವದ ಗುಣಗಾನ ಮಾಡಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು.