ಶಾಲಾ-ಕಾಲೇಜು ಸಮಯಕ್ಕೆ ಪೂರಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಕೋಸಂಬೆ ಸೂಚನೆ

| Published : Jan 04 2025, 12:31 AM IST

ಶಾಲಾ-ಕಾಲೇಜು ಸಮಯಕ್ಕೆ ಪೂರಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಕೋಸಂಬೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆಯಾಗದಂತೆ ಅನುಕೂಲ ಮಾಡಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ: ಜಿಲ್ಲೆಯ ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆಯಾಗದಂತೆ ಅನುಕೂಲ ಮಾಡಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಸ್ ಸಂಚಾರ ಸಮಸ್ಯೆ ಕುರಿತು ಶಾಲಾ ಮಕ್ಕಳಿಂದ ಅಹವಾಲು ಸಲ್ಲಿಕೆಯಾಗಿರುವ ಕುರಿತು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಭಾಂಗಣದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಹಾಗಾಗಿ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಶಾಲಾ ಸಮಯ ನಿಗದಿಯಂತೆ ಬಸ್ ಸಂಚಾರ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಬಸ್‌ಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಕ್ಕಳ ದೂರು-ಸಲಹಾ ಪೆಟ್ಟಿಗೆ, ಬಾಲ್ಯ ವಿವಾಹ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಫಲಕ ಅಥವಾ ಸ್ಟಿಕರ್ ರೂಪದ ಪೋಸ್ಟರ್ ಅಂಟಿಸಲು ಕ್ರಮವಹಿಸಬೇಕು ಎಂದರು.

ಬಸ್ ನಿಲ್ದಾಣಗಳಲ್ಲಿ ಮಕ್ಕಳು ಬಿಟ್ಟುಹೋದಲ್ಲಿ ಅಥವಾ ತಪ್ಪಿಸಿಕೊಂಡಲ್ಲಿ, ಭಿಕ್ಷಾಟನೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ-ಸಂಚಾರ ವ್ಯವಸ್ಥೆ ಕಲ್ಪಿಸಲು ಉದ್ದೇಶ ಹೊಂದಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ವಾಹನ ಚಾಲನಾ ಸಿಬ್ಬಂದಿ ದುಪ್ಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜತೆಗೆ ಬಸ್‌ಗಳ ಟ್ರಿಪ್ ಸಂಖ್ಯೆಯೂ ಹೆಚ್ಚಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಶಿಧರ ಕೋಸಂಬೆ ಮಾಡನಾಡಿ, ಯಾವ ಯಾವ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಂಚಾರದಲ್ಲಿ ಕೊರತೆಯಾಗುತ್ತಿರುವ ಕುರಿತು ಸರ್ವೇ ಮಾಡಿ, ಸಾರಿಗೆ ಮತ್ತು ಬಿಇಒ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಶಾಲಾ-ಕಾಲೇಜು ಸಮಯಕ್ಕೆ ಪೂರಕವಾಗಿ ಬಸ್ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯಕ್ಕಾಗಿ ಪೊಲೀಸ್ ಸಹಾಯವಾಣಿ 112 ಬೋರ್ಡ್ ಅಳವಡಿಸಬೇಕು. ಮಕ್ಕಳಿಗಾಗಿ ಪ್ರತ್ಯೇಕವಾಗಿ ಶೌಚಾಲಯಗಳು ನಿರ್ಮಿಸಬೇಕು ಹಾಗೂ ಚಿಕ್ಕಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಭಾಗೀಯ ಸಂಚಾರಿ ಬಿ. ಚಾಮರಾಜ, ಸಹಾಯಕ ಸಂಚಾರಿಗಳಾದ ಹೇಮಲತಾ, ವೀರಮ್ಮ, ಶಿವಪ್ರಕಾಶ, ಗಂಗಾಧರ, ಮಂಜುನಾಥ, ತಿರುಮಲೇಶ, ಲಕ್ಷ್ಮಣ ಹಾಗೂ ಚಂದ್ರಶೇಖರ ಇತರರಿದ್ದರು.