ಸಾರಾಂಶ
ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದ್ದರು.
ಕನ್ನಡಪ್ರಭ ವಾರ್ತೆ ಗೋಕಾಕ
ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕುರಿತು ರಾಜ್ಯದ ಗಡಿಗಳ ವಿಭಜನೆ ಮಾಡಲು ಡಿ.30ರವರಗೆ ಕಾಲಾವಕಾಶ ನೀಡಿದ್ದು, ಆದಷ್ಟು ಬೇಗ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ವಿಭಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಗೆ ಅವಕಾಶ ಕಲ್ಪಿಸಿ, ದಶಕಗಳ ಕನಸಾದ ಗೋಕಾಕ ಜಿಲ್ಲಾ ಕೇಂದ್ರಕ್ಕೆ ತಾವೇ ನೇತೃತ್ವ ವಹಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುವಂತೆ, ಜಿಲ್ಲಾ ವಿಭಜನೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಚಿವ ಸತೀಶ ಜಾರಕಿಹೊಳಿಗೆ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನಿಯೋಗ ಮನವಿ ಮಾಡಿದೆ.ನಗರದ ಸಚಿವರ ಕಾರ್ಯಾಲಯದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿ, ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನಿಯೋಗವನ್ನು ಭೇಟಿ ಮಾಡಲು ನೇತೃತ್ವ ವಹಿಸಿ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿದರು.
ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದ್ದರು. ಈ ಬಗ್ಗೆ ಕರ್ನಾಟಕ ರಾಜ್ಯ ಪತ್ರದಲ್ಲಿ 26 ಅಗಸ್ಟ್ 1997ರಂದು ಅಧಿಕೃತವಾಗಿ ಕಂದಾಯ ಸಚಿವಾಲಯವು ಅಧಿಸೂಚನೆ ಹೊರಡಿಸಿತ್ತು. ಕಾರಣಾಂತರದಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಯಥಾಪ್ರಕಾರ ಮುಂದುವರೆದಿದೆ. ವಾಸುದೇವ ರಾವ್, ಗದ್ದಿಗೌಡರ ಮತ್ತು ಹುಂಡೇಕರ ಮೂರು ಆಯೋಗಗಳು ಜಿಲ್ಲೆಯನ್ನಾಗಿ ಪರಿವರ್ತಿಸಲು ವರದಿ ನೀಡಿವೆ. ಬೆಳಗಾವಿ ಹೊರತುಪಡಿಸಿದರೆ ಗೋಕಾಕ ನಗರವೇ ಅತಿದೊಡ್ಡದು. ಈ ನಗರವು ವಾಣಿಜ್ಯ, ಉದ್ಯಮ, ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಭರದಿಂದ ಅಭಿವೃದ್ಧಿ ಹೊಂದುತ್ತಿದೆ. ನಾಗರಿಕರಿಗೆ ಉತ್ತಮ ಸೇವಾ ಸೌಲಭ್ಯ ಹಾಗೂ ಆಡಳಿತ ಸೌಕರ್ಯಗಳನ್ನು ಪೂರೈಸುವ ದೃಷ್ಟಿಕೋನದಿಂದ ಚಿಕ್ಕ ತಾಲೂಕು ಹಾಗೂ ಜಿಲ್ಲೆಗಳ ಅವಶ್ಯಕತೆಗಳನ್ನು ಗಮನಿಸಿ ಆಯೋಗಗಳ ಶಿಫಾರಸ್ಸಿನಂತೆ ಗೋಕಾಕ ಜಿಲ್ಲೆಯನ್ನಾಗಿ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಹಾಗೂ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಬಿಪಾಟೀಲ, ಬಸವರಾಜ ಖಾನಪ್ಪನವರ, ಸಿ.ಡಿ ಹುಕ್ಕೇರಿ, ವಿಶ್ವನಾಥ ಕಡಕೋಳ, ಸುರೇಶ ಜಾಧವ, ವಿಠ್ಠಲ ಮೇಳವಂಕಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ಸದಸ್ಯರು ಇದ್ದರು.ಶಾಸಕರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ:
ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯವರ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಈಗಾಗಲೇ ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲಾ ಹೋರಾಟ ಸಮಿತಿ ನಿಯೋಗ ಕರೆದೊಯ್ಯಲು ಶೀಘ್ರವಾಗಿ ಸಮಯ ಕಲ್ಪಿಸಲು ಸಮಯ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.