ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ

| Published : Oct 14 2024, 01:20 AM IST

ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಹಬ್ಬ ಹಾಗೂ ಸರಣಿ ರಜೆ ಮುಗಿಸಿ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಭಾನುವಾರ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಯಿತು.

ಹುಬ್ಬಳ್ಳಿ: ದಸರಾ ಹಬ್ಬ ಹಾಗೂ ಸರಣಿ ರಜೆ ಮುಗಿಸಿ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಭಾನುವಾರ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಯಿತು.

ಅ. 11ರಂದು ಮಹಾನವಮಿ- ಆಯುಧಪೂಜೆ, 12ರಂದು ವಿಜಯದಶಮಿ ಹಾಗೂ 13ರಂದು ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ನೌಕರರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿರುವ ಹಲವರು ಸ್ವಂತ ಊರುಗಳಿಗೆ ಆಗಮಿಸಿದ್ದರು. ಆದ್ದರಿಂದ ಈ ಅವಧಿಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು.

ರಜೆ ಮುಗಿಸಿಕೊಂಡು ತಮ್ಮ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರ ಪ್ರಯಾಣಿಕರಿಂದಾಗಿ ಭಾನುವಾರ ನಗರದ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ, ನವಲಗುಂದ, ಕಲಘಟಗಿ ಬಸ್ ನಿಲ್ದಾಣಗಳಿಂದ ಮಧ್ಯಾಹ್ನದಿಂದಲೇ ನೆರೆಯ ಜಿಲ್ಲೆಗಳು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಸೇರಿದಂತೆ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ ಕಡೆಗೆ ಹೆಚ್ಚಿನ ಜನರು ಪ್ರಯಾಣ ಮಾಡಿರುವುದು ಕಂಡುಬಂತು.

ನಿತ್ಯದ ಎಲ್ಲ ಬಸ್‌ಗಳ ಜೊತೆಗೆ ಮಲ್ಟಿ ಆ್ಯಕ್ಸಲ್ ವೋಲ್ವೋ, ಸ್ಲೀಪರ್ ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ಹೆಚ್ಚುವರಿ ವಿಶೇಷ ಮುಂಗಡ ಬುಕ್ಕಿಂಗ್ ಬಸ್ಸುಗಳು ಸಹ ಭರ್ತಿಯಾಗಿದ್ದವು. ಮುಂಗಡ ಕಾಯ್ದಿರಿಸದೇ ನೇರವಾಗಿ ಬಸ್ ನಿಲ್ದಾಣಗಳಿಗೆ ಬಂದಂತಹ ಹೆಚ್ಚಿನ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಓಡಿಸಲಾಯಿತು ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಅಧಿಕಾರಿಗಳಾದ ಕೆ.ಎಲ್. ಗುಡೆಣ್ಣವರ, ಪಿ.ವೈ. ಗಡಾದ, ಸದಾನಂದ ಒಡೆಯರ, ಸುನಿಲ ವಾಡೇಕರ್, ಶಬ್ಬೀರ ಬೀಳಗಿ, ಐ.ಐ. ಕಡ್ಲಿಮಟ್ಟಿ, ಐ.ಜಿ. ಮಾಗಾಮಿ, ಡಿಪೊ‌ ಮ್ಯಾನೇಜರಗಳಾದ ರೋಹಿಣಿ ಬೇವಿನಕಟ್ಟಿ, ಮಹೇಶ್ವರಿ, ಮುನ್ನಾಸಾಬ, ನಾಗರಾಜ, ಅಶೋಕ, ನಿಲ್ದಾಣಾಧಿಕಾರಿಗಳಾದ ವಿ.ಎಸ್. ಹಂಚಾಟೆ, ಸುಭಾಸ ಮತ್ತು ಸಿಬ್ಬಂದಿಗಳು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಹಾಜರಿದ್ದು ತಡರಾತ್ರಿಯ ವರೆಗೆ ವಿಶೇಷ ಬಸ್‌ಗಳ ಮೇಲ್ವಿಚಾರಣೆ ಮಾಡಿದರು.