ಸಿ.ಟಿ.ರವಿ, ಪ್ರತಾಪ್ ಸಿಂಹ, ಯತ್ನಾಳ್ ರನ್ನು ಬಂಧಿಸಿ: ಶಿವರಾಮೇಗೌಡ ಆಗ್ರಹ

| Published : Sep 13 2025, 02:04 AM IST

ಸಾರಾಂಶ

ಕಲ್ಲು ತೂರಾಟ ಪ್ರಕರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಕಿಡಿಗೇಡಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಈ ನಾಯಕರು ಮದ್ದೂರಿಗೆ ಬಂದು ಪ್ರಚೋದನಾಕಾರಿ ಭಾಷಣ ಮಾಡುವುದು ಎಷ್ಟು ಸರಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮದ್ದೂರು ಘಟನೆ ಬಗ್ಗೆ ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ನಾಯಕರಾದ ಸಿ.ಟಿ.ರವಿ, ಪ್ರತಾಪ್‌ಸಿಂಹ ಹಾಗೂ ಶಾಸಕ ಬಸವರಾಜ ಪಾಟಿಲ್ ಯತ್ನಾಳ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದರೆ ಸಾಲದು, ಈ ಮೂವರನ್ನು ಬಂಧಿಸಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ನಿವಾಸದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಖಂಡನೀಯ. ಆದರೆ, ಘಟನೆ ಬಗ್ಗೆ ಬಿಜೆಪಿ ನಾಯಕರು ಉದ್ರೇಕದ ಹೇಳಿಕೆ ನೀಡುವ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಕಲ್ಲು ತೂರಾಟ ಪ್ರಕರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಕಿಡಿಗೇಡಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಈ ನಾಯಕರು ಮದ್ದೂರಿಗೆ ಬಂದು ಪ್ರಚೋದನಾಕಾರಿ ಭಾಷಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಳೆದ ವರ್ಷ ನಾಗಮಂಗಲ ಮತ್ತು ಈ ಬಾರಿ ಮದ್ದೂರಿನಲ್ಲಿ ಗಣೇಶೋತ್ಸವದ ವೇಳೆ ಗಲಭೆ ಉಂಟಾಗಲು ಪೊಲೀಸರ ವೈಫಲ್ಯವೇ ಕಾರಣ. ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಘಟನೆಗಳೂ ಸಹ ಸಂಭವಿಸಿದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು ಗಣೇಶೋತ್ಸವ ಸೇರಿದಂತೆ ಯಾವುದೇ ಹಬ್ಬ ಆಚರಣೆ ವೇಳೆ ಅಗತ್ಯ ಬಂದೋಬಸ್ತ್ ನಿಯೋಜಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ವಕೀಲ ಟಿ.ಕೆ.ರಾಮೇಗೌಡ, ಮುಖಂಡರಾದ ಚಿಣ್ಯ ಕರಿಯಣ್ಣ, ಬಿದರಕೆರೆ ಮಂಜೇಗೌಡ, ಬಿ.ವಿ.ಸತ್ಯನ್, ಲಾರಿ ಚನ್ನಪ್ಪ, ತೊಳಲಿ ಕೃಷ್ಣಮೂರ್ತಿ, ಚಂದ್ರಶೇಖರ್, ಸೋಮಶೇಖರ್ ಸೇರಿದಂತೆ ಹಲವರು ಇದ್ದರು.

ಪ್ರಚೋದನಕಾರಿ ಭಾಷಣ: ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಮದ್ದೂರು:

ಪಟ್ಟಣಕ್ಕೆ ಗುರುವಾರ ಭೇಟಿ ನೀಡಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಯತ್ನಾಳ್ ಪಟ್ಟಣಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಬಹಿರಂಗವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಅನ್ಯಕೋಮಿನ ಧರ್ಮಕ್ಕೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಮಾಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪಿಎಸ್ಐ ಮಂಜುನಾಥ್ ದೂರಿನ ಅನ್ವಯ ಬಿಎನ್ಎಸ್ 196(1)(a), 299, 353(2) ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಬಿಜೆಪಿ ಶಾಸಕ ಸಿ.ಟಿ.ರವಿ ಬಳಿಕ ಮತ್ತೊರ್ವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಪ್ರಕರಣ ದಾಖಲಾಗಿದೆ.