ಬೆಂಗಳೂರು : ಕಳೆದ ಆರು ತಿಂಗಳಿಂದ ರಾಜ್ಯ ರಾಜಕಾರಣವನ್ನು ಕಾಡುತ್ತಿರುವ ಗೊಂದಲಗಳಿಗೆ ಪರಿಹಾರದ ನಿರೀಕ್ಷೆ ಹುಟ್ಟಿಸಿರುವ ಕಾಂಗ್ರೆಸ್ ವರಿಷ್ಠರ ಹೈವೋಲ್ಟೇಜ್ ಸಭೆ ದೆಹಲಿಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿ ‘ಇಂದಿರಾ ಭವನ’ದ ಐದನೇ ಮಹಡಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಂಪುಟ ಪುನಾರಚನೆಯೋ ಅಥವಾ ನಾಯಕತ್ವ ಬದಲಾವಣೆಯೋ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯುವುದೇ ಎಂಬ ಕುತೂಹಲ ಹುಟ್ಟುಹಾಕಿದೆ.
ಈ ಹೈವೋಲ್ಟೇಜ್ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗ ಸಚಿವರೊಂದಿಗೆ ಪ್ರತ್ಯೇಕವಾಗಿ ಈಗಾಗಲೇ ದೆಹಲಿ ತಲುಪಿದ್ದಾರೆ. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಲಿರುವ ಮೂರು ಸ್ಥಾನಗಳಿಗೆ ಅಭ್ಯರ್ಥಿ ಅಖೈರುಗೊಳಿಸುವುದು ಈ ಸಭೆಯ ಅಧಿಕೃತ ಅಜೆಂಡಾ.
5 ಮಂದಿಗಷ್ಟೇ ಸದ್ಯ ಆಹ್ವಾನ:
ಆದರೆ, ಮಂಗಳವಾರ ಬೆಳಗ್ಗೆ 11ಕ್ಕೆ ನಡೆಯುವ ಈ ಸಭೆಯಲ್ಲಿ ಖುದ್ದು ರಾಹುಲ್ ಗಾಂಧಿ ಅವರು ಪಾಲ್ಗೊಳ್ಳಲಿರುವ ಕಾರಣ ಸಭೆಯ ಫಲಿತಾಂಶದ ಬಗ್ಗೆ ನಿರೀಕ್ಷೆ ಮೇರೆ ಮೀರಿದೆ. ಸಭೆಯಲ್ಲಿ ರಾಹುಲ್ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿಗೆ ಮಾತ್ರ ಈವರೆಗೆ ಅಧಿಕೃತ ಆಹ್ವಾನವಿದೆ.
ಎಲ್ಲರ ಚಿತ್ತ ದೆಹಲಿಯತ್ತ:
ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಬ್ಬರು ಕಡೆ ಕ್ಷಣದಲ್ಲಿ ಸಭೆಗೆ ಸೇರಿಕೊಳ್ಳಬಹುದು. ಆದರೆ, ಅವರ ಉಪಸ್ಥಿತಿ ಇನ್ನೂ ಖಚಿತವಾಗಿಲ್ಲ. ಸಭೆಯಲ್ಲಿ ಹೊರಬೀಳುವ ನಿರ್ಧಾರ ಅಥವಾ ಸುಳಿವು ರಾಜ್ಯದ ಮುಂದಿನ ಎರಡು ವರ್ಷಗಳ ಆಡಳಿತದ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಇಡೀ ರಾಜ್ಯ ರಾಜಕಾರಣದ ದೃಷ್ಟಿ ಈ ಸಭೆಯತ್ತ ನೆಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಬಯಸುತ್ತಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಪಲ್ಲಟ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಬಯಸುತ್ತಿರುವ ನಾಯಕತ್ವ ಬದಲಾವಣೆ- ಈ ಎರಡರ ಪೈಕಿ ಹೈಕಮಾಂಡ್ ಯಾವುದಕ್ಕೆ ಮನ್ನಣೆ ನೀಡಲಿದೆ ಮತ್ತು ಯಾವುದೋ ಒಂದಕ್ಕೆ ಮನ್ನಣೆ ನೀಡಿದರೂ ಅದರಿಂದಾಗುವ ದೂರಗಾಮಿ ಪರಿಣಾಮಗಳಿಗೆ ಹೇಗೆ ಮದ್ದು ಅರೆಯುತ್ತದೆ ಎಂಬುದು ಕುತೂಹಲದ ಮೂಲ.
ಏಕೆಂದರೆ, ಸಿದ್ದರಾಮಯ್ಯ ಬಣ ಬಯಸುವಂತೆ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದರೆ ಅದರ ಅರ್ಥ ನಾಯಕತ್ವ ಬದಲಾವಣೆ ಅರ್ಥಾತ್ ಮುಖ್ಯಮಂತ್ರಿಯಾಗುವ ಡಿ.ಕೆ.ಶಿವಕುಮಾರ್ ಅವರ ಬಯಕೆಗೆ ಈ ಅವಧಿಯಲ್ಲಿ ಎಳ್ಳು ನೀರು ಬಿಟ್ಟಂತೆ.
ಹೈಕಮಾಂಡ್ ಇಂತಹ ನಿಲುವು ಕೈಗೊಂಡರೆ ಡಿ.ಕೆ.ಶಿವಕುಮಾರ್ ಹಾಗೂ ಅವರ ಬಣ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ. ಒಂದು ವೇಳೆ ಒಳ ಗುದ್ದಾಟ ಆರಂಭಿಸಿದರೆ ಅದನ್ನು ನಿಭಾಯಿಸುವುದು ಹೇಗೆ? ಎಂಬ ಮಹತ್ವದ ಪ್ರಶ್ನೆಗಳಿಗೆ ಈಗಲೇ ಉತ್ತರ ಕಂಡುಕೊಳ್ಳಬೇಕು.
ಅಕಸ್ಮಾತ್ ಶಿವಕುಮಾರ್ ಬಣ ಬಯಸುವಂತೆ ನಾಯಕತ್ವ ಬದಲಾವಣೆಗೆ ಮುಂದಾದರೆ ಅತ್ಯಂತ ಪ್ರಬಲ ನಾಯಕ ಸಿದ್ದರಾಮಯ್ಯ ಅವರನ್ನು ಸುಮ್ಮನೆ ಕೂರಿಸುವುದೇ? ಸಿದ್ದರಾಮಯ್ಯ ಅವರಿಗಿಂತ ಹೆಚ್ಚಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸದ ಸಿದ್ದು ಬೆಂಬಲಿಗ ಪಡೆ ಯಾವ ರೀತಿ ಪ್ರತಿಕ್ರಿಯಿಸಲಿದೆ. ಆ ಬಣವನ್ನು ಸಮಾಧಾನ ಮಾಡುವುದು ಹೇಗೆ? ಎಂಬುದಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ.
ಇದರ ನಡುವೆ, ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿ ಹೊಸ ರಾಜಕೀಯ ಬೆಳವಣಿಗೆಗಳು ಶುರುವಾದರೆ ತಮಗೂ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಡಾ.ಜಿ.ಪರಮೇಶ್ವರ್ ಸೇರಿ ಕೆಲವರು ಇದ್ದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಅವರೂ ಕ್ರಿಯಾಶೀಲರಾಗುವ ಸಾಧ್ಯತೆಯಿದೆ.
ಹೀಗೆ ನಾನಾ ಆಯಾಮ ಹೊಂದಿರುವ ಈ ಪ್ರಶ್ನೆಗಳಿಗೆ ಹೈಕಮಾಂಡ್ ಹೇಗೆ ಸಮಾಧಾನ ಕಂಡು ಹಿಡಿಯಲಿದೆ ಅಥವಾ ಕಾಂಪ್ರಮೈಸ್ ಫಾರ್ಮೂಲಾ ಏನಾದರೂ ಸಭೆಯ ಮುಂದಿಡಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಸಂಪುಟ ಪುನಾರಚನೆಯಷ್ಟೇ-ಸಿದ್ದು ಬಣ:
ಸಿದ್ದರಾಮಯ್ಯ ಬಣವು ಅಧಿಕಾರ ಹಸ್ತಾಂತರ ಎಂಬ ಪ್ರಶ್ನೆಯೇ ಇಲ್ಲ. ಹೀಗೇನಿದ್ದರೂ ಸಚಿವ ಸಂಪುಟ ಪುನಾರಚನೆಯಷ್ಟೇ ಎಂಬ ಅಭಿಪ್ರಾಯ ಹೊಂದಿದೆ. ಏಕೆಂದರೆ, ಅಧಿಕಾರ ಹಸ್ತಾಂತರವೆಂಬ ವಿಚಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದೇ ಇಲ್ಲ. ಈ ವಿಚಾರದಲ್ಲಿ ರಾಹುಲ್ ಏನು ಹೇಳುತ್ತಾರೋ ಅದೇ ಅಂತಿಮ ಎನ್ನುತ್ತದೆ.
ಈ ಬಣದ ಪ್ರಕಾರ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಮುಂದುವರೆದ ವರ್ಗಕ್ಕೆ ಸಿಎಂ ಪದವಿ ನೀಡಲಾಗಿದ್ದು, ರಾಜ್ಯದಲ್ಲಿ ಮಾತ್ರ ಹಿಂದುಳಿದ ವರ್ಗದ ನಾಯಕರು ಸಿಎಂ ಆಗಿದ್ದಾರೆ. ಅಹಿಂದ ವರ್ಗದ ವ್ಯಕ್ತಿಯನ್ನು ಅಧಿಕಾರದಿಂದ ತೆಗೆದರೆ ಅದು ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರುವ ಕಾರಣ ಅಂತಹ ದುಸ್ಸಾಹಸಕ್ಕೆ ರಾಹುಲ್ ಕೈ ಹಾಕುವುದಿಲ್ಲ ಎನ್ನುತ್ತದೆ.
ಅಕಸ್ಮಾತ್ ರಾಹುಲ್ ಗಾಂಧಿ ಅವರು ಸಿಎಂ ಪದವಿ ಬಿಡಿ ಎಂದೇನಾದರೂ ಹೇಳಿದರೆ ಆಗ ಸಿದ್ದರಾಮಯ್ಯ ಅವರಂತಹ ಪ್ರಬಲ ನಾಯಕರನ್ನು ಮನೆಯಲ್ಲಿ ಕೂರಿಸಲು ಸಾಧ್ಯವಿಲ್ಲ. ಹೀಗಾದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಬಳಕೆಯಾಗದೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಸಿಎಂ ಹುದ್ದೆಯಲ್ಲದೆ ಯಾವ ಸ್ಥಾನ ನೀಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಈ ಬಣದ ನಾಯಕರು.
ಡಿಕೆಶಿ ಬಣದ ವಾದವೇನು?
ಇದಕ್ಕೆ ಡಿ.ಕೆ.ಶಿವಕುಮಾರ್ ಬಣದ ಪ್ರಕಾರ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮನಸ್ಸು ಮಾಡಿದರೆ ಆಗ ರಾಜ್ಯಸಭೆಗೆ ಸಿದ್ದರಾಮಯ್ಯ ಅವರನ್ನು ಕಳುಹಿಸಿ ಅವರ ಪುತ್ರ ಯತೀಂದ್ರ ಅವರಿಗೆ ಡಿಸಿಎಂ ಪದವಿ ನೀಡಬಹುದು. ಹೀಗಾದಾಗ ಸಿದ್ದರಾಮಯ್ಯ ಅವರಿಗೂ ಸ್ಥಾನ ನೀಡಿ, ಅವರ ಕುಟುಂಬಕ್ಕೂ ಗೌರವ ನೀಡುವುದರಿಂದ ಹಿಂದುಳಿದವರು ಅದರಲ್ಲೂ ಮುಖ್ಯವಾಗಿ ಕುರುಬ ಸಮುದಾಯ ಪಕ್ಷದೊಂದಿಗೆ ಉಳಿಯುತ್ತದೆ ಎಂಬ ವಾದ ಮುಂದಿಡುತ್ತದೆ.
ಆದರೆ, ಸಿದ್ದರಾಮಯ್ಯ ಬಣ ಇದನ್ನು ಬಿಲ್ ಕುಲ್ ಒಪ್ಪುತ್ತಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಅವರೇ ಸಿಎಂ ಹುದ್ದೆ ಬಿಡಿ ಎಂದೇನಾದರೂ ಹೇಳಿದರೆ ಆಗ ಸಿದ್ದರಾಮಯ್ಯ ಅವರು ತಾವು ಸೂಚಿಸಿದ ವ್ಯಕ್ತಿಗೆ ಸಿಎಂ ಹುದ್ದೆ ನೀಡಿ ಎಂದು ಷರತ್ತು ಇಡುವ ಸಾಧ್ಯತೆ ಹೆಚ್ಚು. ಏಕೆಂದರೆ ಸಿದ್ದರಾಮಯ್ಯ ತಮಗೆ ಪರ್ಯಾಯವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಹುದ್ದೆ ನೀಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಆ ಬಣದ ನಾಯಕರು ಹೇಳುತ್ತಾರೆ.
ಇಂತಹ ತಿಕ್ಕಾಟ ಇರುವ ಕಾರಣಕ್ಕೇ ಹೈಕಮಾಂಡ್‌ಗೆ ನಾಯಕತ್ವ ವಿಚಾರ ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ಹಾಲಿ ಪರಿಸ್ಥಿತಿಯನ್ನೇ ಮುಂದುವರೆಸಿ ಸಿಎಂ ಹುದ್ದೆ ಬಯಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸರ್ಕಾರದಲ್ಲಿ ಮತ್ತಷ್ಟು ಹೆಚ್ಚಿನ ನಿಯಂತ್ರಣ, ಕೆಪಿಸಿಸಿ ನಾಯಕತ್ವದಲ್ಲಿ ಮುಂದುವರೆಸುವ ಹಾಗೂ ಮುಂದಿನ ಚುನಾವಣೆ ನೇತೃತ್ವ ಹಾಗೂ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆಯ ಆಶ್ವಾಸನೆ ನೀಡುವ ಕಾಂಪ್ರಮೈಸ್ ಫಾರ್ಮುಲಾವನ್ನು ಹೈಕಮಾಂಡ್ ಮುಂದಿಡಬಹುದು ಎಂದು ತಟಸ್ಥ ಬಣ ವಾದಿಸುತ್ತಿದೆ.
ಆದರೆ, ಇದಕ್ಕೆ ಸಿಎಂ ಹುದ್ದೆಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಡಿ.ಕೆ.ಶಿವುಕುಮಾರ್ ಒಪ್ಪುವರೇ ಎಂಬ ಪ್ರಶ್ನೆಯಿದೆ. ಹೀಗಾಗಿ ಹೈಕಮಾಂಡ್ ಅರ್ಥಾತ್ ರಾಹುಲ್ ಗಾಂಧಿ ಅವರು ‘ಕರ್ ನಾಟಕ’ ರಾಜಕಾರಣದ ಈ ಅಂಕಕ್ಕೆ ಯಾವ ರೀತಿಯ ತಿರುವು ನೀಡಲಿದ್ದಾರೆ ಎಂಬ ತೀವ್ರ ಕುತೂಹಲಕ್ಕೆ ಮಂಗಳವಾರದ ಸಭೆ ಕಾರಣವಾಗಿದೆ.
--
ಸಿಎಂ ಬಣದ ವಾದವೇನು?
- ಇಂದಿನ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ಚರ್ಚೆ. ಸಂಪುಟ ಪುನಾರಚನೆಗೆ ಸಮ್ಮತಿ ನೀಡಲು ಇದೇ ವೇಳೆ ಸಿಎಂ ಆಗ್ರಹ ಮಂಡನೆ
- ಖಾಲಿ ಇರುವ 3 ಸ್ಥಾನ (ನಾಗೇಂದ್ರ, ರಾಜಣ್ಣ, ಡಿ. ಸುಧಾಕರ್‌ರಿಂದ ತೆರವಾದದ್ದು), ಜತೆಗೆ 12 ಹಾಲಿ ಸಚಿವರಿಗೆ ಕೊಕ್ ನೀಡಿ 15 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಸ್ತಾಪ
- ಸಚಿವ ಸ್ಥಾನ ತೆರವು ಮಾಡಿದವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ. ಆದರೆ ಹೈಕಮಾಂಡ್ ಅಧಿಕಾರ ಹಸ್ತಾಂತರದಂತಹ ಜೇನುಗೂಡಿಗೆ ಕಲ್ಲು ಹಾಕುವುದಿಲ್ಲ
- ಅಕಸ್ಮಾತ್ ನಾಯಕತ್ವ ವಿಚಾರ ಪ್ರಸ್ತಾಪವಾದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಹಿಂದುಳಿದ ಸಿಎಂ ಸಿದ್ದರಾಮಯ್ಯ ಎಂಬ ಟ್ರಂಪ್ ಕಾರ್ಡ್ ಅನ್ನು ವರಿಷ್ಠರ ಮುಂದಿಡಲಾಗುತ್ತದೆ
- ಕೇರಳದ ವಿ.ಡಿ.ಸತೀಶನ್ (ನಾಯರ್), ತೆಲಂಗಾಣದ ರೇವಂತ್ ರೆಡ್ಡಿ (ರೆಡ್ಡಿ), ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು (ರಜಪೂತ) ಯಾರೂ ಹಿಂದುಳಿದ ಅಥವಾ ಶೋಷಿತ ವರ್ಗದವರಲ್ಲ ಎಂದು ವಾದಿಸುವುದು
- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದ ಮತ ಮುಖ್ಯ ಕಾರಣ. ಒಕ್ಕಲಿಗರಿಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರೂ ಆಯ್ಕೆಗಳಿವೆ. ಹೀಗಾಗಿ ಕುರುಬರು ಹಾಗೂ ಅಹಿಂದ ವರ್ಗದ ಬೆಂಬಲ ಕಳೆದುಕೊಳ್ಳಬಾರದು ಎಂದು ವಾದಿಸುವುದು
-ಬಾಕ್ಸ್-
ಡಿಸಿಎಂ ಬಣದ ವಾದವೇನು?
- ಸರ್ಕಾರ ಅಧಿಕಾರಕ್ಕೆ ಬಂದಾಗ ನಡೆದ ಒಪ್ಪಂದ ಪಾಲನೆಯಾಗಬೇಕಿದೆ. ಒಪ್ಪಂದವಾಗಿದ್ದು ತಲಾ ಎರಡೂವರೆ ವರ್ಷಕ್ಕೆ. ಈಗ 3 ವರ್ಷವಾಗಿದೆ. ಹೀಗಾಗಿ ಹೈಕಮಾಂಡ್ ಒಪ್ಪಂದ ಪಾಲನೆಗೆ ಒತ್ತು ನೀಡಲಿದೆ
- ರಾಹುಲ್‌ಗಾಂಧಿ ಹೇಳಿದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುತ್ತಾರೆ. ಪ್ರತಿಪಕ್ಷ ನಾಯಕ, ಎರಡು ಬಾರಿ ಸಿಎಂ ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಮನ್ನಣೆ ನೀಡುತ್ತಾರೆ
- ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ. ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಲಿದೆ. ಅವರ ಪುತ್ರ ಯತೀಂದ್ರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಭವಿಷ್ಯದ ನಾಯಕನನ್ನಾಗಿ ರೂಪಿಸಲಿದೆ
- ಡಿ.ಕೆ.ಶಿವಕುಮಾರ್ ಪಕ್ಷದ ಮನುಷ್ಯ. ಪಕ್ಷಕ್ಕಾಗಿ ಜೈಲಿಗೆ ಹೋದವರು. ಹೀಗಾಗಿ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಮನವೊಲಿಸಲಿದ್ದಾರೆ
