‘ಪೆಟ್ರೋಲ್, ಡೀಸೆಲ್ ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕು ಅಸ್ತವ್ಯಸ್ತಗೊಳಿಸುತ್ತಿದ್ದು, ಕೂಡಲೇ ಬೆಲೆ ಏರಿಕೆ ನಿರ್ಣಯ ಹಿಂಪಡೆಯಬೇಕು. ಜತೆಗೆ ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆ ಹೊತ್ತು ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಪೆಟ್ರೋಲ್, ಡೀಸೆಲ್ ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕು ಅಸ್ತವ್ಯಸ್ತಗೊಳಿಸುತ್ತಿದ್ದು, ಕೂಡಲೇ ಬೆಲೆ ಏರಿಕೆ ನಿರ್ಣಯ ಹಿಂಪಡೆಯಬೇಕು. ಜತೆಗೆ ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆ ಹೊತ್ತು ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ವಿಷಯವಾಗಿ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಲಾ ₹3 ಹೆಚ್ಚಳ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿರುವುದು ಖಂಡನೀಯ. ಅಡುಗೆ ಅನಿಲ ಸಮಸ್ಯೆ ಸೃಷ್ಟಿಸಿ ಬಳಿಕ ಬೆಲೆ ಏರಿಕೆ ಮಾಡಿದರು. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ನಿರಂತರವಾಗಿ ಬೀಳುತ್ತಿರುವ ರುಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆ ಹೊತ್ತು ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆ ತಲೆ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿ ಎಂದು ಕಿಡಿಕಾರಿದ್ದಾರೆ.
ದೈನಂದಿನ ಬದುಕು ದುಸ್ತರವಾಗಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ. ಒಂದಕ್ಕೆ ₹106 ಹಾಗೂ ಡೀಸೆಲ್ ದರ ₹94 ಆಗಿದೆ. ಇದರಿಂದ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆ ಆಗುತ್ತದೆ. ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರ ದೈನಂದಿನ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಿದ್ದಾಗ ಅದರ ಲಾಭವನ್ನು ಬೊಕ್ಕಸಕ್ಕೆ ತುಂಬಿಕೊಂಡ ಮೋದಿ ಅವರು, ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ದರ ಏರಿಕೆ ನಿರ್ಧಾರ ಹಿಂಪಡೆಯಲಿ:ಪ್ರಧಾನಿ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಲಿ. ಪೆಟ್ರೋಲ್, ಡೀಸೆಲ್ ದರ ತಲಾ 3 ರು. ಏರಿಕೆ ಮಾಡಿರುವ ನಡೆಯನ್ನು ಕಠಿಣವಾಗಿ ವಿರೋಧಿಸುತ್ತೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೀಟ್ ಪರೀಕ್ಷೆ ಮಾಡುವಲ್ಲಿ ಕೇಂದ್ರ ವಿಫಲ:ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ನಡೆಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ನೀಟ್ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಜತೆ ಚೆಲ್ಲಾಟ ಆಡಿದಂತಾಗಿದೆ. ಅವರೆಲ್ಲರೂ ಮತ್ತೆ ಪರೀಕ್ಷೆ ಬರೆಯುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಎಸ್‌ಐಆರ್‌ಗೆ ಸಿದ್ಧತೆ: ಸಿಎಂ
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್‌ಐಆರ್ ಪ್ರಾರಂಭ ಆಗುತ್ತಿದೆ. ಅದಕ್ಕಾಗಿ ನಾವು ಸರ್ಕಾರದಿಂದ ಬೇಕಾದ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.ಬೆಲೆ ಏರಿಕೆಯೇ ಮೋದಿ ಅವರ ಕೊಡುಗೆ:ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದು, ಅದಕ್ಕಾಗಿ ದೇಶಕ್ಕೆ ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಬೇರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ವಿದ್ಯುತ್ ಉಳಿಸಿ, ಪೆಟ್ರೋಲ್ ವಾಹನ ಬಳಸಬೇಡಿ ಎಂದು ಹೇಳುತ್ತಿದ್ದಾರೆ. ಇಂಧನ ಬಳಸದೇ ನಿತ್ಯ ಜೀವನ ಮಾಡುವುದು ಹೇಗೆ? ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳನ್ನು ಕಡಿತಗೊಳಿಸಿದ್ದಾರೆ. ಆದರೆ, ಜನ ಸಾಮಾನ್ಯರು ಓಡಾಟ ಮಾಡದೇ ಇರಲಾಗುತ್ತದೆ. ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ? ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರೆ. ಅದು ಹೇಗೆ ಸಾಧ್ಯ? ವಿವಾಹಿತ ಮಹಿಳೆಯರಿಗೆ ಮಾಂಗಲ್ಯ ಸರಬೇಕು. ಹೀಗಿದ್ದಾಗ ಚಿನ್ನಕೊಳ್ಳಬೇಡಿ ಎಂಬುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಎಸ್‌ಐಆರ್ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು. ಎಸ್‌ಐಆರ್ ಬಗ್ಗೆ ನಾವೂ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಪಕ್ಷದವರಾದರೂ ತಮ್ಮ ಪರವಾದ ಮತಗಳನ್ನು ರಕ್ಷಿಸಿಕೊಳ್ಳಬೇಕು. ಎಸ್‌ಐಆರ್ ಉದ್ದೇಶ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವುದಾಗಿದೆ. ಆ ಮತಗಳನ್ನು ನಾವು ಕಾಪಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.