ಹೊಸಕೋಟೆ: ನಗರದಲ್ಲಿ ಯಾದವ ಜನಾಂಗದ ಹಲವಾರು ವರ್ಷಗಳ ಬೇಡಿಕೆ ಯಾದವ ಭವನ ನಿರ್ಮಾಣದ ಕನಸು ನನಸಾಗಿದ್ದು ಸರಳವಾಗಿ ಪೂಜಾ ಕಾರ್ಯಕ್ರಮ ಮಾಡಿದ್ದು ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಆಕಾಶವಾಣಿ ಬಡಾವಣೆಯಲ್ಲಿ ನಿರ್ಮಿಸಿರುವ ಯಾದವ ಭವನದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019ರಲ್ಲಿ ಯಾದವ ಭವನದ ಕಾಮಗಾರಿ ಪ್ರಾರಂಭಗೊಂಡು ಇದೀಗ ಉದ್ಘಾಟನೆ ಹಂತಕ್ಕೆ ತಲುಪಿದೆ. ಉದ್ಘಾಟನೆಗೆ ಮುಖ್ಯಮಂತ್ರಿಗಳ ಆಗಮನಕ್ಕೆ ಒತ್ತಡದ ಕಾರ್ಯ ಕಲಾಪಗಳ ಹಿನ್ನೆಲೆ ಇಂದು ಶಾಸ್ತ್ರೋಕ್ತವಾಗಿ, ಪೂಜಾ ಕಾರ್ಯ ನೆರವೇರಿಸಿ ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲ ಗಣ್ಯರನ್ನು ಆಹ್ವಾನಿಸಿ ಬೃಹತ್ ವೇದಿಕೆ ನಿರ್ಮಿಸಿ ಭವನ ಲೋಕಾರ್ಪಣೆ ಮಾಡಲಿದ್ದೇವೆ ಎಂದರು.ಚಿತ್ರದುರ್ಗ ಯಾದವ ಗುರುಪೀಠದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ಯಾದವ ಸಮುದಾಯದ ಮುಖಂಡರ ಪರಿಶ್ರಮದ ಫಲವಾಗಿ ರಾಜ್ಯದಲ್ಲಿ ಅತ್ಯುತ್ತಮ ಯಾದವ ಭವನ ನಿರ್ಮಾಣವಾಗಿದೆ. ಇದೇ ರೀತಿ ಸಮುದಾಯ ಒಗ್ಗಟ್ಟಿನಿಂದ ಸರ್ಕಾರದ ಮಟ್ಟದಲ್ಲಿ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.ತಾಲೂಕು ಯಾದವ ಸಂಘದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ ಮಾತನಾಡಿ, ಸುಮಾರು ೮ ಕೋಟಿ ವೆಚ್ಚದಲ್ಲಿ ಯಾದವ ಭವನ ನಿರ್ಮಿಸಲಾಗಿದ್ದು ಸಮುದಾಯದ ಬಡ, ಮಧ್ಯಮ ವರ್ಗದವರು ಮದುವೆ ಶುಭ ಸಮಾರಂಭ ಮಾಡಿಕೊಳ್ಳಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಸಮುದಾಯದಿಂದ ವಸತಿ ನಿಲಯ ಸ್ಥಾಪಿಸುವ ಚಿಂತನೆ ಮಾಡಲಾಗಿದೆ. ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಮುನ್ನೆಲೆಗೆ ಬರಬೇಕೆನ್ನುವುದು ನಮ್ಮ ಆಶಯ ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್, ಯಾದವ ಯುವ ವೇದಿಕೆ ರಾಜ್ಯಾಧ್ಯಕ್ಷ ಸುನಿಲ್ ಯಾದವ್, ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್, ಭೂ ನ್ಯಾಯ ಮಂಡಳಿ ಸದಸ್ಯ ಪಿಕೆಎಸ್ ಶ್ರೀನಿವಾಸ್ ಇತರರು ಹಾಜರಿದ್ದರು.ಫೋಟೋ: 13 ಹೆಚ್‌ಎಸ್‌ಕೆ 1
ಹೊಸಕೋಟೆಯ ಆಕಾಶವಾಣಿ ಬಡಾವಣೆಯಲ್ಲಿ ಯಾದವ ಸಮುದಾಯದಿಂದ ನಿರ್ಮಿಸಿರುವ ಯಾದವ ಭವನವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.