ಸಾರಾಂಶ
ಹಾಸನದ ಅಮಾಯಕ ಮಹಿಳೆಯರ ಅತ್ಯಾಚಾರ ಆರೋಪಿಗಳಾದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಬಂಧನ ವಿಳಂಬ ಖಂಡಿಸಿ ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ಹಾಕಿದ್ದಾರೆ.
ರಾಣಿಬೆನ್ನೂರು: ಹಾಸನದ ಅಮಾಯಕ ಮಹಿಳೆಯರ ಅತ್ಯಾಚಾರ ಆರೋಪಿಗಳಾದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಬಂಧನ ವಿಳಂಬ ಖಂಡಿಸಿ ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಇಡೀ ಮಹಿಳಾ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದು 10 ದಿನ ಕಳೆದಿವೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಕಡೆ ಪ್ರಕರಣ ಕೂಡ ದಾಖಲಾಗಿದೆ. ಈ ವಿಚಾರ ಕುರಿತು ಎಸ್‌ಐಟಿ ತನಿಖೆ ಪ್ರಾರಂಭಿಸಿದ್ದರೂ ಆರೋಪಿಗಳು ರಾಜಕೀಯ ಪ್ರಭಾವಿಗಳಾಗಿದ್ದರಿಂದ ಬಂಧನ ವಿಳಂಬವಾಗುತ್ತಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಇಂತಹ ದುರ್ಘಟನೆಯ ವಿರುದ್ಧ ಗೃಹ ಮಂತ್ರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದ್ದಾರೆ. ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪಿಗಳು ವಿದೇಶಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಈ ಪ್ರಕರಣದ ಕುರಿತು ದೇಶಾದ್ಯಂತ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಆದರೂ ಸರ್ಕಾರ ಇಂತಹ ಕಾಮುಕರ ಬಂಧಿಸುವುದನ್ನು ಬಿಟ್ಟು ಹಾರಿಕೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಬಂಧಿಸದಿದ್ದರೆ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನವನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹನುಮವ್ವ ಸವಣೂರು. ಬರ್ಮವ್ವ ವಡ್ಡರ, ರತ್ನವ್ವ ಬೇವಿನಹಳ್ಳಿ, ರತ್ನವ್ವ ಕೆರೋಡಿ, ಶಿವಕ್ಕ ಕಂಬ್ಳಿ, ಮಂಜವ್ವ ವಡ್ಡರ್, ಶಿವಪ್ಪ ಕೆರೋಡಿ, ಮಾರುತಿ ದೊಡ್ಡಮನಿ, ಜಗದೀಶ್ ಕೆರೋಡಿ, ನಾಗರಾಜ್ ಕಂಬಳಿ, ಮಲ್ಲೇಶ್ ಜ್ಯೋತಿ, ರಾಜು ಓಲೆಕಾರ್, ರವಿ ಕೆರೋಡಿ, ರಮೇಶ್ ಕುರುಗುಂದ, ಹನುಮಂತ ಪರಸಪ್ಪ ಕುರುಗುಂದ, ಶಶಿಧರ್ ಹಾದಿಮನಿ, ಮಾಲ್ತೇಶ್ ವಡ್ಡರ್ ಮತ್ತಿತರರಿದ್ದರು.