ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪೆನ್‌ಡ್ರೈವ್ ಲೈಂಗಿಕ ದೌರ್ಜನ್ಯ ಆರೋಪಿ ಪ್ರಜ್ವಲ್ ರೇವಣ್ಣರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿಯ ಮೋಹನ್‌ಕುಮಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ನಿಯೋಗದ ನೇತೃತ್ವವಹಿಸಿದ್ದ ಬಾ.ಹ ರಮಾಕುಮಾರಿ ಮಾತನಾಡಿ, ಕಳದೆ ಕೆಲವು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಪ್ರತಿ ದಿನ ಹೊಸ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್ ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಎಲ್ಲೆಡೆ ಹರಡಿದೆ ಎಂದು ಹೇಳಿದರು.ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಮೊದಲ ಆರೋಪಿಯಾದ ಎಚ್.ಡಿ.ರೇವಣ್ಣರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು. ಸಾರ್ವಜನಿಕವಾಗಿ ಇಷ್ಟೆಲ್ಲಾ ಅನಾಹುತ ನಡೆದು ಆತಂಕ ಹರಡಿರುವಾಗ ಈ ಕುರಿತು ತಡವಾಗಿಯಾದರೂ ಎಚ್ಚೆತ್ತುಕೊಂಡು ಇಡೀ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕು ಎಂದರು.ಪ್ರೊ.ಕೆ ದೊರೈರಾಜ್ ಮಾತನಾಡಿ, ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾಧವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯವಾಗಿದೆ ಎಂದು ಹೇಳಿದರು.ರಾಜಕೀಯ ಅಧಿಕಾರದ ಮದದಿಂದ ಮೆರೆಯುತ್ತಿರುವ ಪ್ರಜ್ವಲ್ ರೇವಣ್ಣ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳಲು ತನಗಿರುವ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ. ಇಂತಹ ದುಷ್ಕರ್ಮಿಗಳನ್ನು ಸರ್ಕಾರ ಹಸ್ತಕ್ಷೇಪ ಮಾಡದೇ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದರು.
ಮಹಿಳಾ ಘಟಕದ ಅನುಸೂಯಮ್ಮ ಮಾತನಾಡಿ, ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ 2 ಸಾವಿರಕ್ಕೂ ಹೆಚ್ಚು ಫೋಟೋ, ವೀಡಿಯೋಗಳಿವೆ, ಆ ಕುರಿತು ಬಿಜೆಪಿ ಹೈಕಮಾಂಡ್ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಪೋಲೀಸರು ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಿದಲ್ಲಿ ಆ ವೀಡಿಯೋಗಳನ್ನು ಚಿತ್ರೀಕರಿಸಿರುವ ವ್ಯಕ್ತಿ ಯಾರು? ದೇವರಾಜೇಗೌಡರಿಗೆ ಆ ವೀಡಿಯೋಗಳನ್ನು ನೀಡಿರುವ ವ್ಯಕ್ತಿ ಯಾರು? ಎನ್ನುವುದು ಗೊತ್ತಾಗುತ್ತದೆ ಎಂದರು.ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದರೆ ಯಾರಿಗೆ ಈ ವೀಡಿಯೋಗಳನ್ನು ನೀಡಿದ್ದಾನೆ. ಯಾರು ಈ ವೀಡಿಯೋಗಳನ್ನು ಪೆನ್‌ಡ್ರೈವ್ ಮುಖಾಂತರ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ಆಗ ಇನ್ನುಮುಂದೆ ವೀಡಿಯೋಗಳು ಬಿಡುಗಡೆಯಾಗುವುದನ್ನು ತಡೆಯಬಹುದಾಗಿದೆ. ಹಲವು ಮಹಿಳೆಯರ ಮಾನ, ಪ್ರಾಣಗಳು ಉಳಿಯಲಿವೆ. ಈ ಲೈಂಗಿಕ ಅಕ್ರಮದ ಮೂಲ ವ್ಯಕ್ತಿಯನ್ನು ಬಂಧಿಸಿ ಸಮಾಜದಲ್ಲಿ ಮುಂದೆ ಆಗುವ ಅನಾಹುತಗಳನ್ನು ತೆಡೆಯಬೇಕು ಎಂದು ಹೇಳಿದರು.ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪದಾಧಿಕಾರಿಗಳಾದ ಡಾ.ಅರುಂಧತ್ತಿ, ರಾಣಿಚಂದ್ರಶೇಖರ್, ದೀಪು, ಲಲಿತಾಮಲ್ಲಪ್ಪ, ದಸಂಸದ ನರಸಿಂಹಮೂರ್ತಿ, ಸಿಐಟಿಯುನ ಸೈಯದ್ ಮುಜೀಬ್. ಸುಬ್ಬಣ್ಣ, ಸ್ಲಂ ಸಮಿತಿ ಮಹಿಳಾ ಘಟಕದ ಅನುಪಮಾ, ಅರುಣ್, ಇನ್ಷಾದ ರಫೀಕ್, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ, ರೈತ ಸಂಘಟನೆಯ ಉಮೇಶ್, ಎಐಎಂಎಸ್ ನ ರತ್ನಮ್ಮ, ಶಾಮಲ, ವರದಕ್ಷಿಣೆ ವಿರೋಧಿ ವೇದಿಕೆಯ ಅನುಸೂಯಮ್ಮ ಇದ್ದರು.