ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ವಿವಿಧ ಬಡಾವಣೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಒಟ್ಟು ೧೪ ಆರೋಪಿಗಳನ್ನು ಬಂಧಿಸಿ ಅವರಿಂದ ₹೬೭.೭೯ ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ನಗರದಲ್ಲಿ ಒಟ್ಟು ೧೨ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೭೧ ಗ್ರಾಂ ಚಿನ್ನಾಭರಣ, ₹೩೦ ಲಕ್ಷ ನಗದು, ೪ ಬೈಕ್, ಎಸಿ ಸೇರಿದಂತೆ ಒಟ್ಟು ₹೬೭,೭೯,೫೦೦ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿದ್ದಾಗಿ ತಿಳಿಸಿದರು.
ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಅಪ್ರಾಪ್ತನನ್ನು ವಶಪಡಿಸಿಕೊಳ್ಳಲಾಗಿದ್ದು, ಆತನಿಂದ ₹೪.೮೦ ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ. ಆದರ್ಶನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ 3 ಬೈಕ್‌ಗಳ ಹಾಗೂ ಬಂಗಾರ ಕಳ್ಳತನಕ್ಕೆ ಸಂಬಂಧಿಸಿದಂತೆ ಮುರ್ತುಜಸಾಬ್ ಉರ್ಫ್‌ಬಾಬಾ ಮೊಹ್ಮದ್‌ಆದಿಲ್‌ಷಾಹ್ ಖಾನ್ (೨೧) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ೪೫ ಗ್ರಾಂ ಚಿನ್ನಾಭರಣ, ೩ ಬೈಕ್ ಸೇರಿದಂತೆ ₹೫.೧೦ ಲಕ್ಷ ಮೌಲ್ಯದ ವಸ್ತು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಆರೋಪಿಯನ್ನು ಮೋದ್ಯಾ ಸರ್ದಾರ್‌ಸಾಬ್ ವಾಲಿಕಾರ ಎಂದು ಗುರುತಿಸಲಾಗಿದೆ. ಆರೋಪಿಯಿಂದ ₹೧೦.೩೨ ಲಕ್ಷ ಮೌಲ್ಯದ ೧೭೨ ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಆದರ್ಶನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಸಾಗರ ಸಂಪತ್ ತೇವರೆಟ್ಟಿ ಎಂಬ ಯುವಕನನ್ನು ಬಂಧಿಸಲಾಗಿದ್ದು, ಒಟ್ಟು ಎರಡು ಪ್ರಕರಣದಲ್ಲಿ ಈತ ಭಾಗಿಯಾಗಿದ್ದು ಎನ್ನಲಾಗಿದ್ದು, ಆತನಿಂದ ₹೨೩ ಸಾವಿರ ನಗದು ಸೇರಿದಂತೆ ₹೮೮ ಸಾವಿರ ನಗದು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಹಮೀದ್ ಪಠಾಣ ಎಂದು ಗುರುತಿಸಲಾಗಿದ್ದು, ಆತನಿಂದ ಚಿನ್ನಾಭರಣ ಜಪ್ತು ಮಾಡಲಾಗಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸೀಫ್ ಉಸ್ಮಾನ್ ಜಮಾದಾರನನ್ನು ಬಂಧಿಸಿದ್ದು, ₹೪೦ ಸಾವಿರ ಮೌಲ್ಯದ ಹವಾನಿಯಂತ್ರಕಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರುದ್ದೇಶ ಗಂಗಪ್ಪ ಬಡಿಗೇರ ಎಂಬ ಆರೋಪಿಯನ್ನು ಬಂದಿಸಿದ್ದು, ₹೧.೬೫ ಲಕ್ಷ ಮೌಲ್ಯದ ವಸ್ತು ಜಪ್ತು ಮಾಡಿದೆ.ಹಿಟಾಚಿ ಬ್ರೇಕರ್ ಕಳ್ಳರ ಬಂಧನ:
ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಟ್ಯಾಚ್ ಬ್ರೇಕರ್ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ಶಟ್ಟಿ ಉರ್ಫ್ ಸತೀಶ ಗೇಮು ರಾಠೋಡ, ಮಾರುತಿ ಶಂಕರ ರಾಠೋಡ, ಮೌಲಾಲಿ ಹುಸೇನಸಾಬ್ ಮಮದಾಪೂರ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ₹೪.೫ ಲಕ್ಷ ಮೌಲ್ಯದ ಹಿಟಾಚಿ ಬ್ರೇಕರ್ ಜಪ್ತು ಮಾಡಲಾಗಿದೆ ಎಂದು ತಿಳಿಸಿದರು.ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಗರಗ ಗ್ರಾಂದ ಕೆ.ಮುನೇಶ ಉರ್ಫ್ ರಮೇಶ ಹನುಮಂತಪ್ಪ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ₹೧೦ ಲಕ್ಷ ನಗದು ಮೊಬೈಲ್ ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಅದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಜಿಲ್ಲೆಯ ಫೀಕರಪ್ಪ ನೀಲಪ್ಪ ಬೇಲೂರ, ವಿಜಯನಗರದ ಹರಪ್ಪನಹಳ್ಳಿಯ ನಿವಾಸಿ ಪ್ರವೀಣ ಕೃಷ್ಣಪ್ಪ ತಳವಾರ, ಅದೇ ಗ್ರಾಮದ ನಿವಾಸಿ ಹಣಮಂತ ಉಮೇಶ ಇಟಗಿಯನ್ನು ಬಂಧಿಸಲಾಗಿ ₹೨೦ ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಟಾಟಾ ನೆಕ್ಸಾನ್ ಕಾರು ವಶಕ್ಕೆ ಪಡೆದಿದ್ದಾಗಿ ತಿಳಿಸಿದರು.