ಸಾಲ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಬಂಧನ

| Published : Dec 25 2024, 12:47 AM IST

ಸಾರಾಂಶ

ಸಂತ್ರಸ್ತ ಮಹಿಳೆಯ ದೂರದ ಸಂಬಂಧಿಯ ಮೂಲಕ ಆರೋಪಿ ಸೂರನಹಳ್ಳಿ ಚೆಲುವರಾಮು ಹಾಗೂ ಬೊಮ್ಮನಹಳ್ಳಿ ಪುಟ್ಟಮ್ಮನವರ ಮಗ ರವಿ ಎಂಬುವರು ಪರಿಚಯವಾಗಿ ನಾವು ಬಿಜೆಪಿ ಮುಖಂಡರು, ನಮಗೆ ಎಲ್ಲ ರಾಜಕಾರಣಿಗಳ ಸಂಪರ್ಕ ಇದೆ ಎಂದು ನನ್ನನ್ನು ನಂಬಿಸಿ, ದಾಖಲೆಗಳನ್ನು ಕೇಳುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಿದ್ದರು. ಸಾತನೂರು, ಕನಕಪುರ, ರಾಮನಗರ ಕಚೇರಿಗಳಲ್ಲಿ ದಾಖಲಾತಿ ಪಡೆದುಕೊಳ್ಳಬೇಕು ಎಂದು ಕರೆಸಿಕೊಂಡು ಸಾಲ ಕೊಡಿಸುವುದಾಗಿ ಅಲೆದಾಡಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಕನಕಪುರ

ವಿವಾಹಿತ ಮಹಿಳೆಯೊಬ್ಬರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಬಿಜೆಪಿ ಮುಖಂಡನನ್ನು ಸಾತನೂರು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಾತನೂರು ಹೋಬಳಿಯ ಸೂರನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಚಲುವರಾಮು ಬಂಧಿತ ಆರೋಪಿ. ತಲೆ ಮರೆಸಿಕೊಂಡಿರುವ ಎರಡನೇ ಆರೋಪಿ ಬೊಮ್ಮನಹಳ್ಳಿ ಪುಟ್ಟಮ್ಮನವರ ಮಗ ರವಿ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಹಿಳೆಗೆ ಜಮೀನಿನ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿ ರಾಮನಗರದ ರಾಮಗಡ್ ಹೋಟೆಲ್‌ ನಲ್ಲಿ ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆಯ ಆರೋಪವಾಗಿದೆ.

ಸಂತ್ರಸ್ತ ಮಹಿಳೆಯ ದೂರದ ಸಂಬಂಧಿಯ ಮೂಲಕ ಆರೋಪಿ ಸೂರನಹಳ್ಳಿ ಚೆಲುವರಾಮು ಹಾಗೂ ಬೊಮ್ಮನಹಳ್ಳಿ ಪುಟ್ಟಮ್ಮನವರ ಮಗ ರವಿ ಎಂಬುವರು ಪರಿಚಯವಾಗಿ ನಾವು ಬಿಜೆಪಿ ಮುಖಂಡರು, ನಮಗೆ ಎಲ್ಲ ರಾಜಕಾರಣಿಗಳ ಸಂಪರ್ಕ ಇದೆ ಎಂದು ನನ್ನನ್ನು ನಂಬಿಸಿ, ದಾಖಲೆಗಳನ್ನು ಕೇಳುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಿದ್ದರು. ಸಾತನೂರು, ಕನಕಪುರ, ರಾಮನಗರ ಕಚೇರಿಗಳಲ್ಲಿ ದಾಖಲಾತಿ ಪಡೆದುಕೊಳ್ಳಬೇಕು ಎಂದು ಕರೆಸಿಕೊಂಡು ಸಾಲ ಕೊಡಿಸುವುದಾಗಿ ಅಲೆದಾಡಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಸಾಲ ಕೊಡುವವರು ಬಂದಿದ್ದಾರೆ ಎಂದು ಚಲುವರಾಮು ಅವರು ಸೋಮವಾರ ರಾತ್ರಿ 7:30ಕ್ಕೆ ರಾಮನಗರಕ್ಕೆ ಕರೆಸಿಕೊಂಡರು, ಅಲ್ಲಿಂದ ಚಲುವರಾಮು ಅವರು ಆಟೋದಲ್ಲಿ ಬಿಎಂ ರಸ್ತೆಯ ರಾಮಗಡ್ ಹೋಟೆಲ್ ಬಳಿ ಕರೆದುಕೊಂಡು ಹೋದರು. ನನ್ನ ಮುಖಕ್ಕೆ ಮಾಸ್ಕ್ ಹಾಕಿಸಿ ರೂಮ್ ಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು. ನಾನು ಪ್ರತಿರೋಧ ಒಡ್ಡಿದಾಗ ಕಪಾಳಕ್ಕೆ ಹೊಡೆದರು, ನಾನು ಪ್ರಜ್ಞೆ ಕಳೆದುಕೊಂಡೆ, ಮತ್ತೆ ಪ್ರಜ್ಞೆ ಬಂದಾಗ ಬೆಳಗಾಗಿತ್ತು, ಅಲ್ಲಿ ಯಾರೂ ಇರಲಿಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡೆ, ಆದರೆ ನನ್ನ ಮಕ್ಕಳು ಅನಾಥರಾಗುತ್ತಾರೆ ಎಂದು ಯೋಚಿಸಿ ನಡೆದ ಘಟನೆ ಬಗ್ಗೆ ಮನೆಯಲ್ಲಿ ತಿಳಿಸಿದೆ.

ಆ ನಂತರ ಚಲುವರಾಮು ಹಾಗೂ ರವಿ ಇಬ್ಬರೂ ನನಗೆ ಕರೆ ಮಾಡಿ ನಿನ್ನ ಖಾಸಗಿ ವಿಡಿಯೋಗಳು ನಮ್ಮ ಬಳಿ ಇವೆ. ನಾನು ಹೇಳಿದಾಗಲೆಲ್ಲ ಬರಬೇಕು. ಇಲ್ಲದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಚಲುವರಾಮು ಎಂಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.