ಐವರು ದರೋಡೆಕೋರರ ಬಂಧನ: ಕಾರು, ಮಾರಕಾಸ್ತ್ರ ಜಪ್ತಿ

| Published : Mar 16 2024, 01:46 AM IST / Updated: Mar 16 2024, 03:36 PM IST

ಸಾರಾಂಶ

ಮಾಗಾನಹಳ್ಳಿ ರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನ ಬಳಿ ಮಾ.8ರ ರಾತ್ರಿ  ಐವರು ದರೋಡೆಕೋರರು ದಾರಿಯಲ್ಲಿ ಬರುತ್ತಿದ್ದ ವಾಹನಗಳನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಎಸ್‌ಪಿ ಉಮಾ ಪ್ರಶಾಂತ್‌ಗೆ ಲಭಿಸಿದ ಮಾಹಿತಿ ಆಧರಿಸಿ, ಪೊಲೀಸ್ ತಂಡವು ಮಹಾರಾಷ್ಟ್ರದ ಐವರು ದರೋಡೆಕೋರರನ್ನು ಬಂಧಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರಿನಿಂದ 11 ಕೆಜಿ ಚಿನ್ನ ತಂದಿದ್ದ ವ್ಯಾಪಾರಿಯನ್ನು ದರೋಡೆ ಮಾಡುವ ಯತ್ನ ವಿಫಲವಾಗಿದ್ದರಿಂದ ಬಂದು, ಹೋಗುವ ಖರ್ಚು ಸರಿದೂಗಿಸಿಕೊಳ್ಳಲು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮಾರಕಾಸ್ತ್ರ ತೋರಿಸಿ ತಡೆದು, ದರೋಡೆ ಹೊಂಚು ಹಾಕಿದ್ದ ಮಹಾರಾಷ್ಟ್ರ ಮೂಲಕ ಐವರು ಅಂತಾರಾಜ್ಯ ದರೋಡೆಕೋರರ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕ ಆಯುಧಗಳ ಆಜಾದ ನಗರ ಪೊಲೀಸರು ಜಪ್ತಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಹೊರ ವಲಯದ ಮಾಗಾನಹಳ್ಳಿ ರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನ ಬಳಿ ಮಾ.8ರ ರಾತ್ರಿ 12.30ರ ವೇಳೆ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನ ನಿಲ್ಲಿಸಿಕೊಂಡು, ಯಾರೋ ಐವರು ದರೋಡೆಕೋರರು ದಾರಿಯಲ್ಲಿ ಹೋಗಿ, ಬರುತ್ತಿದ್ದ ವಾಹನಗಳನ್ನು ನಿಲ್ಲಿಸಲು, ದರೋಡೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಎಸ್‌ಪಿ ಉಮಾ ಪ್ರಶಾಂತ್‌ರಿಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡವು ಮಹಾರಾಷ್ಟ್ರ ಮೂಲದ ಐವರು ದರೋಡೆಕೋರರನ್ನು ವಾಹನ, ಮಾರಕಾಸ್ತ್ರಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆ ಕರ್ಮಳ ತಾ. ಸೇಲ್‌ಗಾಂವ್‌ನ ಕೂಲಿ ಕೆಲಸಗಾರ ದುರ್ಯೋಧನ ಗಿರಿಜಪ್ಪ ದಗಡೆ(50 ವರ್ಷ), ಅಹಮ್ಮದ್ ನಗರ ಜಿಲ್ಲೆ ಕರ್ಜತ್ ತಾ. ಮಾಳಂಗಿ ವಾಸಿಗಳಾದ ರಮೇಶ ಸೋಪಾನ ಪಿಟ್ಟೆಕಾರ(36), ಲಕ್ಷ್ಮಣ ರಾಜಾರಾಂ(62), ಸತಾರಾ ಜಿಲ್ಲೆ ಸೈದಾಪುರ ಗ್ರಾಮದ ಚಾಲಕ ಲಕ್ಷ್ಮಣ ಜಾಧವ್(32), ಸೊಲ್ಲಾಪುರ ತಾ. ಜೋಪಡಿಪಟ್ಟಿ ಕರ್ಮಳ ವಾಸಿ ಗಣೇಶ ಷಾ ಜಿ(37) ಬಂಧಿತ ಆರೋಪಿಗಳು. ಬಂಧಿತರಿಂದ ಸ್ಕಾರ್ಪಿಯೋ ವಾಹನ, 1 ಶಾಕ್‌ ಅಬ್ಸರ್ ಪೈಪ್‌, ಕಬ್ಬಿಣದ ರಾಜು, ಕಬ್ಬಿಣದ ನಲ್ಲಿ ಪೈಪ್‌, ಜಾಲರಿ ಕಟ್ಟರ್, ವೈಯರ್ ಕಟ್ಟರ್, ಒಂದು ಅಡಿ ಉದ್ದದ ಚಾಕು, 10 ಇಂಚಿನ ಚಾಕು, 6 ಸಣ್ಣ ಬ್ಲೇಡ್ ಚಾಕು, 3 ಜೊತೆ ಹ್ಯಾಂಡ್ ಗ್ಲೌಸ್‌ ಇತರೆ ವಸ್ತುಗಳ ಜಪ್ತಿ ಮಾಡಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಸಂತೋಷ್, ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಆಜಾದ್ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್‌, ಡಿಸಿಆರ್‌ಬಿ ಘಟಕದ ಸಿಬ್ಬಂದಿ ತಂಡ ರಚಿಸಿ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿಯಾದ ಕೆ.ಟಿ.ಆಂಜನೇಯ, ಕೆ.ಸಿ.ರಾಘವೇಂದ್ರ, ಬಾಲರಾಜ, ರಮೇಶ ನಾಯ್ಕ, ಆಜಾದ್ ನಗರ ಠಾಣೆ ಸಿಬ್ಬಂದಿಯ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.