ಸಾರಾಂಶ
ಚರಂಡಿಗೆ ಬಿದ್ದು 3 ಬಾರಿ ಪಲ್ಟಿ ಹೊಡೆದ ಕಾರು ರಸ್ತೆಯಿಂದ ಅಂದಾಜು 10 ಅಡಿ ಎತ್ತರಕ್ಕೆ ಜಿಗಿದು ಪಕ್ಕದ ಮನೆಯ ಅಂಗಳದಲ್ಲಿ ಬಂದು ನಂತಿದೆ. ಈ ದೃಶ್ಯ ನೋಡಿದ ಮನೆಯವರು ಹೆದರಿ ದಂಗಾಗಿದ್ದಾರೆ.
ಬೆಳ್ತಂಗಡಿ: ಇಲ್ಲಿಯ ಜಾರಿಗೆಬೈಲು ಸಮೀಪದ ಗುರುವಾಯನಕೆರೆ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅತಿ ವೇಗ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಕ್ಕದ ಚರಂಡಿಗೆ ಬಿದ್ದು, ನಜ್ಜು-ಗುಜ್ಜಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಚಾಲಕನ ಸ್ಥಿತಿ ಗಂಭೀರವಾಗಿದೆ.
ಉಡುಪಿ ಮೂಲದ ಹೋಲ್ ಸೇಲ್ ಮತ್ತು ರಿಟೈಲರ್ ವ್ಯಾಪಾರದ ವ್ಯಕ್ತಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಓರ್ವ ಮಾತ್ರ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಾಲಕನಿಗೆ ಗಂಭೀರವಾದ ಗಾಯವಾಗಿದ್ದು ಸ್ಥಳೀಯರು 108 ಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಚರಂಡಿಗೆ ಬಿದ್ದು 3 ಬಾರಿ ಪಲ್ಟಿ ಹೊಡೆದ ಕಾರು ರಸ್ತೆಯಿಂದ ಅಂದಾಜು 10 ಅಡಿ ಎತ್ತರಕ್ಕೆ ಜಿಗಿದು ಪಕ್ಕದ ಮನೆಯ ಅಂಗಳದಲ್ಲಿ ಬಂದು ನಂತಿದೆ. ಈ ದೃಶ್ಯ ನೋಡಿದ ಮನೆಯವರು ಹೆದರಿ ದಂಗಾಗಿದ್ದಾರೆ. ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ವಾಹನಗಳ ಸಂಚಾರಕ್ಕೆ ಸಹಕರಿಸಿದರು.ವಿಷ ಸೇವಿಸಿ ವಿವಾಹಿತೆ ಆತ್ಮಹತ್ಯೆಬೆಳ್ತಂಗಡಿ: ಮುಂಡಾಜೆಯ ಕೊಡಂಗೆಯಲ್ಲಿ ಮಹಿಳೆಯೊಬ್ಬರು ಮಕ್ಕಳಿಲ್ಲದ ಕೊರಗಿನಲ್ಲಿ ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.12 ರಂದು ನಡೆದಿದೆ. ಮುಂಡಾಜೆ ಕೊಡಂಗೆ ಮನೆ ಸಮೀಪದ ರಾಘವ ಗೌಡ ಎಂಬವರ ಪತ್ನಿ ರಾಧಾ (೫೭) ಮನೆಯಲ್ಲಿಯೇ ಇದ್ದು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದರು. ಮಕ್ಕಳಾಗದ ವಿಚಾರದಲ್ಲಿ ಆಕೆ ಬಹಳ ನಿರಾಶೆ ಮತ್ತು ಬೇಸರದಿಂದ ಇದ್ದರು. ಕೆಲವು ಸಮಯದಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಮಾನಸಿಕವಾಗಿ ತೀರಾ ನೊಂದುಕೊಂಡಿದ್ದರು. ಮಾ.12ರಂದು ಮಧ್ಯಾಹ್ನ ಪತಿ ರಾಘವ ಮಲಗಿದ್ದರು. ಸಂಜೆ ಸುಮಾರು 4 ಗಂಟೆಯ ಸಮಯಕ್ಕೆ ರಾಧಾ ಅವರು ಹೊರಗಿನಿಂದಲೇ ಪತಿಯನ್ನು ಕರೆದು ತಾನು ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ಸೇವನೆ ಮಾಡಿದ್ದಾಗಿ ತಿಳಿಸಿದ್ದಾರೆ. ಕೂಡಲೇ ಆಕೆಯನ್ನು ಆಟೋರಿಕ್ಷಾದಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.