ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ. ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಪಾಲರಿಗೂ ದೂರು ನೀಡಲಾಗಿದ್ದು, ರಾಜ್ಯಾದ್ಯಂತ ಬುಧವಾರ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು
ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಜಿ ಬೋಪಯ್ಯ, ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಬೇಕೆಂಬ ಕನಸು ನನಸಾಗಿದೆ. ಇಡೀ ದೇಶದ ಜನತೆ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ 30 ವರ್ಷದ ಹಿಂದಿನ ಪ್ರಕರಣವನ್ನು ಮುನ್ನಲೆಗೆ ತಂದು ಕರಸೇವಕರನ್ನು ಬಂಧಿಸುವ ಮೂಲಕ ಸಿದ್ದರಾಮಯ್ಯ ಆಘಾತಕಾರಿ ಸಂದೇಶ ನೀಡುತ್ತಿದ್ದಾರೆ. ಒಂದು ಸಮುದಾಯವನ್ನು ಓಲೈಸುವ ಭರದಲ್ಲಿ ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುವುದು ಖಂಡನೀಯ ಎಂದ ಅವರು, ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಪೊಲೀಸರು ರಾಮ ಭಕ್ತರ ಮನೆಗಳಿಗೆ ತೆರಳಿ ಅವರನ್ನು ಬಂಧಿಸುತ್ತಿರುವುದು ಖಂಡನೀಯ. ನಾವು ಕೂಡ 1989-92 ರ ಅವಧಿಯಲ್ಲಿ ರಾಮಭಕ್ತರಾಗಿ ಸೇವೆ ಸಲ್ಲಿಸಿದ್ದು, ತಾಕತ್ತಿದ್ರೆ ನಮ್ಮನ್ನು ಬಂಧಿಸಿ ಎಂದು ಸವಾಲ್ ಹಾಕಿದರು. ನಾವು ಹಿಂದುತ್ವವನ್ನು ಉಳಿಸುವ ಕೆಲಸ ಮಾಡ್ತಿದ್ದೇವೆ. ಬಂಧನಕ್ಕೆ ಹೆದರೋದಿಲ್ಲ. ಜೈಲು ವಾಸ ಅನುಭವಿಸಲು ಶಕ್ತರಿದ್ದೇವೆ. ಜೈಲಿನಲ್ಲೂ ರಾಮ ಜಪ ಮಾಡ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರು ಅಡ್ಡಿ ಮಾಡಿಲ್ಲ. ಸಾಕಷ್ಟು ಸಂಖ್ಯೆಯ ಮುಸಲ್ಮಾನರು ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಆದರೂ ಮುಸಲ್ಮಾನರ ಮತ ಪಡೆಯುವ ಉದ್ದೇಶದಿಂದ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ನಾವು ಹೆದರೋದಿಲ್ಲ. ಎಲ್ಲಾ ರಾಮ ಭಕ್ತರನ್ನು ಬಂಧಿಸುವುದಾದರೆ ಈಗ ಇರುವ ಜೈಲು ಕೂಡ ಸಾಕಾಗಲ್ಲ ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ ಸತೀಶ್, ನಗರ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಜಗದೀಶ್, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಬಿ.ಎಂ. ರಾಜೇಶ್, ನಗರಸಭಾ ಸದಸ್ಯರುಗಳಾದ ಸಬಿತಾ, ಶಾರದ ನಾಗಾರಾಜ್, ಉಷಾ ಕಾವೇರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.