ಸಾರಾಂಶ
ಬಾಳೆಹೊನ್ನೂರು: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಬಸವನಕೋಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಬಂದಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದಿಸಿದ್ದು, ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಕೊಪ್ಪದ ರವಿ, ಪ್ರತಾಪ್, ಶ್ರೀಕಿತ್ ಬಂಧಿತ ಆರೋಪಿಗಳು. ಅಂಡವಾನೆಯ ಆದರ್ಶ ಎಂಬಾತ ಪರಾರಿಯಾಗಿದ್ದಾನೆ. ಈ ನಾಲ್ವರು ಬಸವನಕೋಟೆ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪ್ರಾಣಿ ಬೇಟೆಯಾಡಲು ಬಂದಿದ್ದು, ಈ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ನಾಡ ಬಂದೂಕು, ಬೈಕ್, ಕತ್ತಿ, ಮದ್ದು ಗುಂಡುಗಳು ಸೇರಿದಂತೆ, ಬೇಟೆಗಾಗಿ ತಂದಿದ್ದ ವಿವಿಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ಎಂ, ಸಂದೀಪ್, ಡಿಆರ್‌ಎಫ್‌ಓ ಮಂಜುನಾಥ್, ಚೇತನ್, ಸಿಬ್ಬಂದಿಗಳಾದ ಯೋಗಾನಂದ, ಪ್ರತಾಪ್, ದೀಕ್ಷಿತ್, ವೆಂಕಟೇಶ್, ಪ್ರಕಾಶ್, ಪ್ರತೀಕ್ ಭಾಗವಹಿಸಿದ್ದರು. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.