ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಗರ್ಭಿಣಿಯರನ್ನು ಲಿಂಗಪತ್ತೆ ಪರೀಕ್ಷೆಗೆ ಒಳಪಡಿಸಿ ಗರ್ಭಪಾತಕ್ಕೆ ಪ್ರೇರೇಪಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.ಭ್ರೂಣ ಹತ್ಯೆಗೆ ಪ್ರೇರೇಪಿಸಿದ್ದ ಆರೋಪ ಎದುರಿಸುತ್ತಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವರಮಾವಿನಕೆರೆ ಗ್ರಾಮದ ನಿವಾಸಿ ಧನಂಜೇಗೌಡ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಎ.ಎಲ್.ಸತೀಶ್ ಮತ್ತು ಮೈಸೂರು ತಾಲೂಕಿನ ನಾಡನಹಳ್ಳಿ ಗ್ರಾಮದ ಪುಟ್ಟರಾಜು ಎಂಬುವವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಪೀಠ, ಗರ್ಭಿಣಿಯರಿಗ ಗರ್ಭಪಾತಕ್ಕೆ ಒಳಗಾಗುವಂತೆ ಪ್ರೇರೇಪಿಸಿರುವ ಗಂಭೀರ ಆರೋಪ ಅರ್ಜಿದಾರರ ಮೇಲಿದೆ. 2024ರ ಏ.24ರಂದು ಪ್ರಕರಣ ದಾಖಲಾಗಿದೆ. ಈವರೆಗೂ ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಲು ಪಡೆಯಲು ಅರ್ಜಿದಾರರು ಅರ್ಹರಲ್ಲ. ಅರ್ಜಿದಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಕ್ರಮ ಜರುಗಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.ಭ್ರೂಣಗಳ ಆರೋಗ್ಯ ಪರೀಕ್ಷೆಗಾಗಿ ವೈದ್ಯಕೀಯ ಕೇಂದ್ರಗಳಿಗೆ ಬರುವ ಗರ್ಭಿಣಿಯರಿಗೆ ಅರ್ಜಿದಾರರು ಭ್ರೂಣ ಪತ್ತೆಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಿದ್ದರು. ಗರ್ಭದಲ್ಲಿ ಹೆಣ್ಣು ಮಗು ಇದ್ದರೆ, ಆ ಬಗ್ಗೆ ಮಾಹಿತಿ ನೀಡಿ ಗರ್ಭಪಾತ ಮಾಡಿಸಲು ಪ್ರೇರೇಪಿಸುತ್ತಿದ್ದರು. ಗರ್ಭಪಾತಕ್ಕೆ ಅಗತ್ಯ ವ್ಯವಸ್ಥೆ ಸಹ ಮಾಡುತ್ತಿದ್ದರು. ಅದಕ್ಕಾಗಿ ಹಣ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪ ಅರ್ಜಿದಾರರ ಮೇಲಿದೆ. ಈ ಕುರಿತು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.