ಬೈಕ್ ಕದಿಯುತ್ತಿದ್ದ ಇಬ್ಬರ ಬಂಧನ

| Published : May 02 2024, 12:17 AM IST

ಸಾರಾಂಶ

ಹಣದ ಆಸೆಗಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡಿ, ಮಾರಾಟ ಮಾಡುತ್ತಿದ್ದ ಆರೋಪದಡಿ ತಾಲೂಕಿನ ಇಬ್ಬರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಹಣದ ಆಸೆಗಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡಿ, ಮಾರಾಟ ಮಾಡುತ್ತಿದ್ದ ಆರೋಪದಡಿ ತಾಲೂಕಿನ ಇಬ್ಬರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಗೋಣಿ ತುಮಕೂರು ನಿವಾಸಿ ಸತೀಶ್ (28) ಮತ್ತು ಬಡಗರಹಳ್ಳಿ ಪುನೀತ್ (24) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಬ್ಬರೂ ಬೆಂಗಳೂರಿನ ಬಗಲಕುಂಟೆ, ನಾಗಸಂದ್ರ, ಮೆಟ್ರೋ ಬಳಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಕದಿಯುತ್ತಿದ್ದರು. ಹೀಗೆ ಲಕ್ಷಾಂತರ ರು. ಮೌಲ್ಯದ 8 ಬೈಕ್ ಗಳನ್ನು ಕಳ್ಳತನ ಮಾಡಿ ಅವುಗಳನ್ನು ತಾಲೂಕು, ಬೇರೆ ಬೇರೆ ಕಡೆ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಮೋಜುಮಸ್ತಿ ಮಾಡುತ್ತಿದ್ದರೆನ್ನಲಾಗಿದೆ.

ಮತ್ತೆ ಬೆಂಗಳೂರಿಗೆ ಹೋಗಿ ದ್ವಿಚಕ್ರ ವಾಹನಗಳನ್ನು ಕದ್ದು ತಂದು ಅವುಗಳ ನಂಬರ್ ಪ್ಲೇಟ್ ತೆಗೆದು ಹಾಕಿ ಮಾರಾಟ ಮಾಡುತ್ತಿದ್ದರು. ಕೆಲವು ಮಾರಾಟವಾಗದ ಬೈಕ್‌ಗಳನ್ನು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದೆ ಚಾಲನೆ ಮಾಡುತ್ತಿದ್ದರು. ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ಬಸ್ ನಿಲ್ದಾಣ ಬಳಿ ಬೈಕ್ ಓಡಿಸುತ್ತಿದ್ದ ವೇಳೆ ಈ ಬಗ್ಗೆ ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ಪಿಎಸ್‌ಐ ಸಂಗಮೇಟಿ ತಿಳಿಸಿದ್ದಾರೆ.