ಕೋರ್ಟ್‌ಗೆ ಬಾರದ ಇಬ್ಬರು ರೌಡಿಗಳ ಸೆರೆ

| Published : May 18 2024, 01:36 AM IST

ಸಾರಾಂಶ

ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಎಲ್‌ ರೆಡ್ಡಿ ಪಾಳ್ಯದ ಮೊಹಮದ್ ಫಾರೂಕ್ ಅಲಿಯಾಸ್‌ ಡುಮ್ಮಿ(32) ಮತ್ತು ಶೇಕ್‌ ಷರೀಫ್‌(27) ಬಂಧಿತರು. ಇತ್ತೀಚೆಗೆ ಜಯನಗರ ಠಾಣೆ ಪೊಲೀಸರ ತಂಡ ಪ್ರಕರಣವೊಂದರ ಸಂಬಂಧ ಕುಮಾರಸ್ವಾಮಿ ಲೇಔಟ್‌ನಲ್ಲಿ ಆರೋಪಿಗಾಗಿ ಹುಡುಕಾಡುವಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇಬ್ಬರೂ ಎಚ್‌ಎಎಲ್‌ ಪೊಲೀಸ್‌ ಠಾಣೆ ರೌಡಿ ಶೀಟರ್‌ಗಳು ಎಂಬುದು ಗೊತ್ತಾಗಿದೆ.

ರೌಡಿ ಮೊಹಮದ್‌ ಫಾರೂಕ್‌ ವಿರುದ್ಧ ಎಚ್‌ಎಎಲ್‌ ಠಾಣೆಯಲ್ಲಿ ಮೂರು ಕೊಲೆ, ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ. ರೌಡಿ ಶೇಕ್‌ ಷರೀಫ್‌ ವಿರುದ್ಧ ಎಚ್ಎಎಲ್‌ ಠಾಣೆಯಲ್ಲಿ ಎರಡು ಕೊಲೆ ಮತ್ತು ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಈತ ಎನ್‌ಡಿಪಿಎಸ್‌ ಪ್ರಕರಣದಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ. ಹೀಗಾಗಿ ಇಬ್ಬರು ರೌಡಿಗಳನ್ನು ಎಚ್‌ಎಎಲ್‌ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಯತ್ನ ಆರೋಪಿ ಬಾರ್‌ನಲ್ಲಿ ಸಿಕ್ಕಿಬಿದ್ದ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಲೆಗೆ ಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ ಎರಡು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆಯ ಚೇತನ್‌(24) ಬಂಧಿತ. ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಬಸವನಗುಡಿ ಠಾಣೆ ಪೊಲೀಸರು ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಬಾರ್‌ವೊಂದರಲ್ಲಿ ಇದ್ದ ವ್ಯಕ್ತಿಗಳ ಎಂಸಿಸಿಐಎನ್‌ಎಸ್‌ ಯಂತ್ರದಲ್ಲಿ ಬೆರಳು ಮುದ್ರೆ ತಪಾಸಣೆ ಮಾಡಿದಾಗ ಹೊಸಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಚೇತನ್‌ ಪತ್ತೆಯಾಗಿದ್ದ.

ಈತ ನ್ಯಾಯಾಲದ ವಿಚಾರಣೆಗೆ ಹಾಜರಾಗದೆ ಎರಡು ವರ್ಷದಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಹಲವು ಬಾರಿ ವಾರೆಂಟ್‌ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿ ಹೊಸಕೋಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ವರ್ಷದಿಂದ ತಪ್ಪಿಸಿಕೊಂಡಿದ್ದವನ ಸೆರೆ

ಕೊಲೆಗೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರುದ್ರಪ್ಪಗೌರ್ಡನ್‌ ನಿವಾಸಿ ಸೂರಿ ಅಲಿಯಾಸ್‌ ಮಾಮು(37) ಬಂಧಿತ. ಆರೋಪಿಯು ಕೆಂಪೇಗೌಡನಗರ ಠಾಣಾ ವ್ಯಾಪ್ತಿಯಲ್ಲಿ 9 ವರ್ಷಗಳ ಹಿಂದೆ ಕೊಲೆಗೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕಾಗಿ ನ್ಯಾಯಾಲಯವು ಹಲವು ಬಾರಿ ಸಮನ್ಸ್‌, ವಾರೆಂಟ್‌ ಜಾರಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ಪೊಲೀಸರ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡವು ಆರೋಪಿ ಸೂರಿ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯದ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.