ಸಾರಾಂಶ
ಧರ್ಮಸ್ಥಳದ ವಿರುದ್ಧ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ.
ಕಾರವಾರ: ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರವಾರ ಘಟಕದಿಂದ ನಗರದ ತಹಸೀಲ್ದಾರ್ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಧರ್ಮಸ್ಥಳದ ವಿರುದ್ಧ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ಈಗಾಗಲೇ ಆರೋಪಿ ಚನ್ನಯ್ಯ ಎಂಬಾತನನ್ನು ಬಂಧಿಸಲಾಗಿದೆ. ಆದರೆ ಆತನ ಹಿಂದೆ ಇರುವವರನ್ನು ಶೀಘ್ರದಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮವಿರೋಧಿ ಕೃತ್ಯಗಳಿಗೆ ಕಾಂಗ್ರೆಸ್ ಕುಮ್ಮಕ್ಕಿದೆ. ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ದೇವರನ್ನು ನಾವು ಬಹುಕಾಲದಿಂದ ಆರಾಧಿಸುತ್ತಿದ್ದೇವೆ. ಇಂತಹ ದೇವರು ಇರುವ ಸ್ಥಳಕ್ಕೆ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.
ಧರ್ಮಸ್ಥಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಹೆಸರು ಹಾಳು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಹಾಗೂ ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರವು ಲಕ್ಷಾಂತರ ರುಪಾಯಿ ವ್ಯಯಿಸಿ ಆತ ಹೇಳಿದ ಕಡೆಗಳೆಲ್ಲೆಲ್ಲ ಗುಂಡಿಗಳನ್ನು ತೋಡಿದೆ. ಇಂತಹ ದುಷ್ಕೃತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ, ಗೃಹಮಂತ್ರಿ ರಾಜ್ಯದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಎಂದು ಮನವಿಯಲ್ಲಿ ಒತ್ತಾಯ ಮಾಡಲಾಗಿದೆ.
ತಹಸೀಲ್ದಾರ್ ಎನ್.ಎಫ್ ನರೋನ್ಹಾ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರವಿರಾಜ ಅಂಕೋಲೆಕರ, ಸಂಜಯ ಸಾಳುಂಕೆ, ಸುಭಾಷ ಗುನಗಿ, ನಾಗೇಶ ಕುರ್ಡೇಕರ, ಸುನೀಲ ಸೋನಿ, ನಯನಾ ನೀಲಾವರ, ರೇಷ್ಣಾ ಮಾಳ್ಸೇಕರ, ಮನೋಜ ಭಟ್ ಇದ್ದರು.