ಸಾರಾಂಶ
ದಾವಣಗೆರೆ: ಮುಸ್ಲಿಮರು ಬಹುಸಂಖ್ಯಾತವಿರುವ ಪ್ರದೇಶಗಳಲ್ಲಿ ಹಿಂದೂಗಳ ಹಬ್ಬ, ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಶಾಂತಿ, ಸಾಮರಸ್ಯ ಕದಡುತ್ತಿರುವ ಮತೀಯ ಗೂಂಡಾಗಳನ್ನು ಪೊಲೀಸರು ಬಂಧಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಲಿ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ವಿಶ್ವ ಹಿಂದು ಪರಿಷತ್ತು ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ರಾಜು, ಮುಸ್ಲಿಮರು ಬಹುಸಂಖ್ಯಾತವಿರುವ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ, ಹಬ್ಬ, ಹರಿದಿನಗಳ ಆಚರಣೆ ವೇಳೆ ಇಂತಹ ಉಪಟಳ ಮತಿ ಮೀರುತ್ತಿದೆ. ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಬೆದರಿಕೆ, ಬಾಟಲಿ ಎಸೆತ ಮಾಡಿದ್ದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ ಎಂದರು.ದಾವಣಗೆರೆ ನಗರದ ಬೇತೂರು ರಸ್ತೆಯ ಅರಳಿಮರ ವೃತ್ತದ ಮುಖಾಂತರ ಸಾಗುವ ಗಣೇಶ ವಿಸರ್ಜನಾ ಮೆರವಣಿಗೆಗಳನ್ನು ತಡೆಹಿಡಿಯಲಾಗಿದೆ. ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಷಡ್ಯಂತ್ರದ ಭಾಗವಾಗಿ ಇಲ್ಲಿನ ಗಾಂಧಿ ನಗರದಲ್ಲಿ ನಮ್ಮದೇ ಜಾಗದಲ್ಲಿದ್ದ ಕೇಸರಿ ಧ್ವಜ ಕಿತ್ತೆಸೆದು, ಅಲ್ಲಿ ಇಸ್ಲಾಂ ಧ್ವಜ ಹಾಕಲಾಯಿತು. ಅದನ್ನು ಪ್ರಶ್ನಿಸಿದ ಹಿಂದೂ ಸಮಾಜದ ದಲಿತ ಯುವಕನನ್ನು 50-60 ಮುಸ್ಲಿಂ ಗೂಂಡಾಗಳು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ, ಗಾಯಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಗಣೇಶ ಮೆರವಣಿಗೆಗಳಿಗೆ ಸೂಕ್ತ ಭದ್ರತೆ, ರಕ್ಷಣೆ ಕೊಡಬೇಕಿದೆ. ಗಲಾಟೆಗೆ ಕಾರಣ ಆಗಿರುವ ಮುಸ್ಲಿಂ ಸಮುದಾಯದ ಮತೀಯ ಗೂಂಡಾಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾಜದ ಹಿರಿಯ ಮುಖಂಡರಾದ ಕೆ.ಬಿ.ಶಂಕರ ನಾರಾಯಣ, ವಿನಾಯಕ ರಾನಡೆ, ವೈ.ಮಲ್ಲೇಶ, ಶಂಭುಲಿಂಗಪ್ಪ ಇತರರು ಇದ್ದರು.- - -