ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರುಚಿಕ್ಕಬಳ್ಳಾಪುರದ ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ನಡೆದ ಇಶಾ ಮಹಾಶಿವರಾತ್ರಿ ಆಚರಣೆಗೆ ಐತಿಹಾಸಿಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬರೋಬ್ಬರಿ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸಿದ್ದರು. ಮಾ.8ರಿಂದ 10ರವರೆಗೆ ನಡೆದ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಮಾ.8ರಂದು ಬೆಳಗ್ಗೆ 8ರಿಂದ ಮಾ.9ರಂದು ಬೆಳಗ್ಗೆ 8ರವರೆಗೆ (ಮೊದಲ ದಿನ) 2.5 ಲಕ್ಷ ಭಕ್ತಾಧಿಗಳು ಮತ್ತು ಮಾ.9ರಂದು 1 ಲಕ್ಷಕ್ಕೂ ಹೆಚ್ಚು ಜನರು ಸದ್ಗುರು ಸನ್ನಿಧಿಗೆ ಭೇಟಿ ನೀಡಿದ್ದರು. ವಾರಾಂತ್ಯದ ದಿನವಾದ ಭಾನುವಾರ 50 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸಿದ್ದರು ಎಂದು ಈಶಾ ಫೌಂಡೇಶನ್ ಮಾಹಿತಿ ನೀಡಿದೆ. ಲಕ್ಷಾಂತರ ಜನರು ಸದ್ಗುರು ಸನ್ನಿಧಿಗೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದರೂ ಯಾವುದೇ ಅಡಚಣೆ ಇಲ್ಲದಂತೆ ಶಿವರಾತ್ರಿ ಮಹೋತ್ಸವದ ಆಚರಣೆ ನಡೆಯಿತು. ಜಿಲ್ಲಾಡಳಿತವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು. 200 ಪೊಲೀಸರು, 200 ಗೃಹ ರಕ್ಷಕರು, 170 ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಕೆಎಸ್‌ಆರ್‌ಪಿ ತುಕಡಿ ಮತ್ತು ಇಶಾ ಸ್ವಯಂ ಸೇವಕರು ಶಿವರಾತ್ರಿ ಆಚರಣೆ ಸುಗಮವಾಗಿ ನೆರವೇರುವಂತೆ ಬಂದೋಬಸ್ತ್ ಕೈಗೊಂಡಿದ್ದರು. ಭಕ್ತಾಧಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೆಎಸ್‌ಆರ್‌ಟಿಸಿ ಐಷರಾಮಿ ಬಸ್‌ಗಳು ಸೇರಿದಂತೆ ಸಾಕಷ್ಟು ಬಸ್‌ಗಳ ವ್ಯವಸ್ಥೆ ಮಾಡಿತ್ತು. ರಾಜ್ಯದ ನಾನಾ ಭಾಗಗಳಿಂದ ನೂರಾರು ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, 4 ಸಾವಿರಕ್ಕೂ ಹೆಚ್ಚು ಕಾರುಗಳು, 5 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಭಕ್ತಾಧಿಗಳು ಆಗಮಿಸಿದ್ದು ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ವೈದ್ಯಕೀಯ ಶಿಬಿರ, ಅಗ್ನಿ ಸುರಕ್ಷತಾ ಕ್ರಮ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಸದ್ಗುರು ಸನ್ನಿಧಿಗೆ ಆಗಮಿಸುವ ಪ್ರತಿಯೊಂದು ವಾಹನಗಳ ತಪಾಸಣೆ ಕೈಗೊಳ್ಳಲಾಗಿತ್ತು. 112 ಅಡಿಗಳ ಆದಿಯೋಗಿ, ಯೋಗೇಶ್ವರ ಲಿಂಗ, ನಾಗ ದೇಗುಲ, ಸಾಂಪ್ರದಾಯಿಕ ಜಾತ್ರೆ ಮತ್ತು ಇಶಾ ಗೋಶಾಲೆಯಲ್ಲಿರುವ ಸ್ಥಳೀಯ ಭಾರತೀಯ ಗೋ ತಳಿಗಳ ಪ್ರದರ್ಶನವು ಭಕ್ತಾಧಿಗಳನ್ನು ಅಯಸ್ಕಾಂತದಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಾರ್ಚ್ 9ರಂದು ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಮಂದಿ ಯೋಗೇಶ್ವರ ಲಿಂಗಕ್ಕೆ ಜಲ ಅರ್ಪಣೆ ಮತ್ತು ಪುಷ್ಪಾರ್ಚನೆ ಹಾಗೂ ಬೇವಿನ ಎಲೆಗಳ ಅಭಿಷೇಕ ಮಾಡಿ ದೇವರ ಕೃಪೆಗೆ ಪಾತ್ರರಾದರು. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಆಚರಣೆಯ ನೇರ ಪ್ರಸಾರವನ್ನು ಶುಕ್ರವಾರ ಸಂಜೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ವೀಕ್ಷಿಸಲು ಅನುಕೂಲವಾಗುವಂತೆ ಸದ್ಗುರು ಸನ್ನಿಧಿಯಲ್ಲಿ ದೈತ್ಯಾಕಾರದ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗಿತ್ತು. ಸದ್ಗುರುಗಳು ಕೈಗೊಂಡಿದ್ದ ಮಧ್ಯರಾತ್ರಿಯ ಆಧ್ಯಾತ್ಮಿಕ ಧ್ಯಾನಕ್ಕೆ ಸುಮಾರು 70 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಸಾಕ್ಷಿಯಾದರು. ಶಿವರಾತ್ರಿ ಆಚರಣೆಗೆ ಬರುವ ಭಕ್ತಾಧಿಗಳಿಗೆಂದೇ ಆದಿಯೋಗಿಯ ಸಮೀಪದಲ್ಲಿ ಸಾಂಪ್ರದಾಯಿಕ ಜಾತ್ರೆ ಆಯೋಜಿಸಲಾಗಿತ್ತು. ಆಹಾರ, ಗೃಹಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ 25ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು.
;Resize=(128,128))
;Resize=(128,128))
;Resize=(128,128))