ಸಾರಾಂಶ
ಕೃಷ್ಣಾ ನದಿ ನೀರು ಮಂಗಳವಾರ ರಾತ್ರಿ ಕ್ಷೇತ್ರದ ೧೨ ಕೆರೆಗಳಿಗೆ ಹರಿಯುತ್ತಿದ್ದು, ನೀರು ಬರುತ್ತಿರುವುದನ್ನು ನೋಡಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಕೃಷ್ಣಾ ನದಿ ನೀರು ಮಂಗಳವಾರ ರಾತ್ರಿ ಕ್ಷೇತ್ರದ ೧೨ ಕೆರೆಗಳಿಗೆ ಹರಿಯುತ್ತಿದ್ದು, ನೀರು ಬರುತ್ತಿರುವುದನ್ನು ನೋಡಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಕಳೆದ ಎರಡು ಮೂರು ತಿಂಗಳ ಹಿಂದೆ ಟಿಸಿ ಸುಟ್ಟಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಟಿಸಿ ದುರಸ್ತಿಗೊಳಿಸಿದ್ದು, ಮಂಗಳವಾರ ಮಧ್ಯರಾತ್ರಿ ಕೆರೆಗಳಿಗೆ ನೀರು ಬರುತ್ತಿದೆ. ತಾಲೂಕಿನ ಹಗೇದಾಳ ಜಾಕ್ ವೆಲ್‌ಗೆ ಕೃಷ್ಣಾ ನದಿ ನೀರು ಬರುತ್ತಿದ್ದು ಅದನ್ನು ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಕೆರೆಗಳಿಗೆ ಹರಿಸಲಾಗಿದೆ.ಕ್ಷೇತ್ರದ ಕೆಂಪು ಕೆರೆ, ಬಳೂಟಗಿ-ಬಸಾಪುರ, ಮಲಕಸಮುದ್ರ, ದಮ್ಮೂರು ಬೂನಕೊಪ್ಪ, ಮುರಡಿ, ತಲ್ಲೂರು, ಚಿಕ್ಕಮ್ಯಾಗೇರಿ ೧ ಮತ್ತು ೨, ಬೆಣಕಲ್ಲ ಕೆರೆಗೆ ಹಗೇದಾಳ ಜಾಕ್ ವೆಲ್ ಮುಖಾಂತರ ನೀರು ಬಿಟ್ಟಿದ್ದಾರೆ. ಕೆರೆಗಳಿಗೆ ನೀರು ಬರುತ್ತಿರುವುದರಿಂದ ರೈತರು ಹಾಗೂ ಜಾನುವಾರುಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಕೆರೆ ತುಂಬಿಸುವ ಯೋಜನೆ ಮೂಲಕ ಅವಳಿ ತಾಲೂಕಿನ ಕೆರೆಗೆ ಕೃಷ್ಣಾಾ ನದಿ ನೀರನ್ನು ಹರಿಸುವ ಕೆಲಸ ಮಾಡಲಾಗಿದ್ದು ಕಳಪೆ ಗುಣಮಟ್ಟದ ಟಿಸಿ ಸುಟ್ಟಿದ್ದರಿಂದ ಕಳೆದ ಎರಡು ಮೂರು ತಿಂಗಳ ಕಾಲ ಕ್ಷೇತ್ರದ ಕೆರೆಗಳಿಗೆ ನೀರು ಸ್ಥಗಿತಗೊಂಡಿತು. ಕೃಷ್ಣಾ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ಕೆ.ಪಿ. ಮೋಹನರಾಜ ಅವರಿಗೆ ಪತ್ರ ಬರೆದು ಕ್ಷೇತ್ರಕ್ಕೆ ನೀರು ಹರಿಸುವಂತೆ ಮನವಿ ಮಾಡಲಾಗಿತ್ತು. ಕಳಪೆ ಮಟ್ಟದ ಕೆಲಸ ಮಾಡಿದ ಗುತ್ತಿಗೆದಾರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಮಂಗಳವಾರ ರಾತ್ರಿ ಕೆರೆಗೆ ನೀರು ಬಂದಿರುವುದು ಖುಷಿ ತಂದಿದೆ. ಇನ್ಮುಂದೆ ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು. ಹೊಸದಾಗಿ ೪೦ ಕೆರೆಗಳಿಗೆ ಸಿಎಂ ಸಿದ್ದರಾಮಯ್ಯ ೧ ಸಾವಿರ ಕೋಟಿ ಅನುದಾನ ನೀಡಿದ್ದು, ಶೀಘ್ರದಲ್ಲೇ ಹೊಸ ಕೆರೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು.ಕೆರೆಗೆ ನದಿ ನೀರು:
ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಕೆರೆಗಳಿಗೆ ಹಗೇದಾಳ ಜಾಕ್ ವೆಲ್ ಮೂಲಕ ಕೃಷ್ಣಾಾನದಿ ನೀರನ್ನು ಹರಿಸಲಾಗಿದೆ. ಕೆರೆ ತುಂಬಿಸುವ ಯೋಜನೆಯಡಿ ನದಿ ನೀರು ಪೂರೈಕೆ ಮಾಡಲಾಗಿದೆ. ಟಿಸಿ ದುರಸ್ತಿ ಮಾಡಲಾಗಿದ್ದು, ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಕೃಷ್ಣಾ ಜಲಭಾಗ್ಯ ನಿಗಮದ ಎಎಇ ಚನ್ನಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.