ನರಸಿಂಹರಾಜಪುರಸರ್ಕಾರಿ ಬಸ್ ಗಳ ಕೆಲವು ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಿಬ್ಬಂದಿಗಳ ಈ ರೀತಿ ವರ್ತನೆಗೆ ಕಡಿವಾಣ ಹಾಕಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಸರ್ಕಾರಿ ಬಸ್ ಗಳ ಕೆಲವು ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಿಬ್ಬಂದಿಗಳ ಈ ರೀತಿ ವರ್ತನೆಗೆ ಕಡಿವಾಣ ಹಾಕಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಆಗ್ರಹಿಸಿದರು. ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಶಕ್ತಿಯೋಜನೆ ಪ್ರಗತಿ ಪರಿಶೀಲನೆ ವೇಳೆ ಈ ವಿಷಯ ಪ್ರಸ್ತಾಪಿಸಿದರು.ಸರ್ಕಾರಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ತಾಲೂಕಿಗೆ ಶಕ್ತಿ ಯೋಜನೆ ಸವಲತ್ತು ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಸಮಿತಿ ಸದಸ್ಯ ಬೇಸಿಲ್ ಮಾತನಾಡಿ, ಸರ್ಕಾರಿ ಬಸ್ ಗಳಿಗೆ ಪ್ರಯಾಣಿಕರು ಅಡ್ಡ ಹಾಕಿದರೆ ನಿಲ್ಲಿಸು ವುದಿಲ್ಲ. ಪ್ರಯಾಣಿಕರು ಇಳಿಯಬೇಕಾದ ಸ್ಥಳದಲ್ಲಿ ನಿಲುಗಡೆಯಿಲ್ಲ ಎಂದು ದೂರದ ಬಸ್ ನಿಲ್ದಾಣಕ್ಕೆ ಬಿಡುತ್ತಾರೆ ಎಂದು ದೂರಿದರು. ಶಿವಮೊಗ್ಗ ಡಿಪೋ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ನಮ್ಮ ದೂರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ, ಚಿಕ್ಕಮಗಳೂರು ಡಿಪೋದಿಂದ ಕೇವಲ 2 ಸರ್ಕಾರಿ ಬಸ್ ಗಳು ಸಂಚರಿಸುತ್ತವೆ. ಇನ್ನುಳಿದ ಹೆಚ್ಚಿನ ಸರ್ಕಾರಿ ಬಸ್ ಗಳು ಶಿವಮೊಗ್ಗ ಡಿಪೋ ವ್ಯಾಪ್ತಿಗೆ ಬರುತ್ತವೆ. ಚಿಕ್ಕ ಮಗಳೂರು ಡಿಪೋ ಅಧಿಕಾರಿಗಳು ಸಭೆಗೆ ಬಂದು ಮಾಹಿತಿ ನೀಡುತ್ತಾರೆ. ಆದರೆ ಹೆಚ್ಚು ಬಸ್ ಗಳು ಸಂಚರಿಸುವ ಶಿವಮೊಗ್ಗ ಡಿಪೋ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುವುದಿಲ್ಲ. ಸಭೆಗೂ ಬರುವುದಿಲ್ಲ. ಮುಂದಿನ ಸಭೆಗೆ ಶಿವಮೊಗ್ಗ ಡಿಪೋ ಅಧಿಕಾರಿಗಳನ್ನು ಕರೆಸುತ್ತೇವೆ ಎಂದರು. ಸದಸ್ಯರು ಮಾತನಾಡಿ, ಬಾಳೆಹೊನ್ನೂರಿನಿಂದ ಬರುವ ಸರ್ಕಾರಿ ಬಸ್ಸಿನ ಸಮಯ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಸಮಯ ಬದಲಾವಣೆ ಆದಲ್ಲಿ ಪ್ರಯಾಣಿಕರಿಗೂ ಅನುಕೂಲ ಇಲಾಖೆಗಗೂ ಆದಾಯ ಬರುತ್ತದೆ ಎಂದರು. ಚಿಕ್ಕಮಗಳೂರು ಬಸ್ ಡಿಪೋನ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, ಯಾವ ಸಮಯಕ್ಕೆ ಬಸ್ ಸಂಚರಿಸಿದರೆ ಅನುಕೂಲ ಎಂದು ಇಲಾಖೆಗೆ ಪತ್ರ ನೀಡಿದರೆ ಸಮಯ ಬದಲಾವಣೆಗೆ ಮೇಲಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಸಿಡಿಪಿಓ ಇಲಾಖೆ ಅಧಿಕಾರಿ ಪ್ರದೀಪ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಅಕ್ಟೋಬರ್ ,ನವೆಂಬರ್, ಡಿಸೆಂಬರ್ ಮೂರು ತಿಂಗಳ ಹಣ ಬಾಕಿಯಿದೆ. ಕುಟುಂಬದ ಮುಖ್ಯಸ್ಥೆ ನಿಧನರಾದರೆ ಮರಣ ಪ್ರಮಾಣ ಪತ್ರವನ್ನು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕು. ಮೃತ ಫಲಾನುಭವಿಯ ಖಾತೆಗೆ ಹಣ ಜಮೆಯಾದಲ್ಲಿ ಮಕ್ಕಳು ಅಥವಾ ಕುಟುಂಬದ ಸದಸ್ಯರು ಎಟಿಎಂ ಮೂಲಕ ಹಣ ಬಿಡಿಸಿಕೊಳ್ಳುತ್ತಾರೆ . ತಿರಸ್ಕೃತಗೊಂಡ ಗೃಹಲಕ್ಷ್ಮೀ ಯೋಜನೆ ಅರ್ಜಿಗಳನ್ನು ಮರುಪರಿಶೀಲನೆಗೆ ಅನುಮೋದಿಸಲಾಗಿದೆ ಎಂದರು. ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಪಡಿತರ ಆಹಾರ ಧಾನ್ಯ ವಿತರಿಸುವಾಗ ವಯಸ್ಸಾ ದವರ ಬೆರಳಚ್ಚು ಬಯೋಮೆಟ್ರಿಕ್ ನಲ್ಲಿ ತೆಗೆದುಕೊಳ್ಳದೆ ಹೋದರೆ ಅವರ ಕಣ್ಣಿನ ಸ್ಕ್ಯಾನ್ ಮಾಡಿ ಪಡಿತರ ವಿತರಿಸಲಾಗುತ್ತದೆ ಎಂದರು.ಮೆಸ್ಕಾ ಇಲಾಖೆ ಪ್ರಶಾಂತ್ ಸಭೆಗೆ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಟಿ.ಟಿ.ಇಸ್ಮಾಯಿಲ್,ನಾಗರಾಜ್, ಬೇಸಿಲ್, ಹೂವಮ್ಮ,ನಿತ್ಯಾನಂದ, ಕ್ಷೇತ್ರಕುಮಾರ್, ದೇವರಾಜ್,ಸೈಯದ್ ಶಫೀರ್ ಅಹಮ್ಮದ್, ರಘು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಶ್ರೀದೇವಿ ಇದ್ದರು.