ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಬಸ್ ನಿಲ್ದಾಣದಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತಿದ್ದು, ಪ್ರತಿದಿನ ಸುಮಾರು ಆರು ಲಕ್ಷಕ್ಕೂ ಹೆಚ್ಚು ಆದಾಯ ತಂದು ಕೊಡುತ್ತಿದೆ. ಒಂದು ವರ್ಷಕ್ಕೆ ಕನಿಷ್ಠ ೨೦ ಕೋಟಿ ಕಲೆಕ್ಷನ್ ತಂದು ಕೊಡುವ ಪ್ರತಿಷ್ಠಿತ ನಿಲ್ದಾಣದಲ್ಲಿ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ.ಕುಡಿಯಲು ನೀರಿಲ್ಲ:
ರಾಜ್ಯದ ರೈಲ್ವೆ ಜಂಕ್ಷನ್ ಕೇಂದ್ರಗಳಲ್ಲಿ ಒಂದಾಗಿರುವ ಅರಸೀಕೆರೆ ಪ್ರತಿದಿನ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಸಂಚರಿಸುತಿದ್ದು ಕಳೆದ ೧೦ ವರ್ಷಗಳ ಹಿಂದೆ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕಲೆಕ್ಷನ್ ತಂದುಕೊಡುವ ನಿಲ್ದಾಣ ಎಂದು ದಾಖಲೆ ನಿರ್ಮಿಸಿತ್ತು. ಇಂತಹ ನಿಲ್ದಾಣದಲ್ಲಿ ದೂರದಿಂದ ಬರುವ ಪ್ರಯಾಣಿಕರಿಗೆ ಬಾಯಾರಿಕೆಯಾದರೆ ಕುಡಿಯಲು ನೀರು ಸಿಗುವುದಿಲ್ಲ. ಇನ್ನು ಇಲ್ಲಿನ ಸ್ವಚ್ಛತೆ ಕೇಳುವಂತೆಯೇ ಇಲ್ಲ. ನಿಲ್ದಾಣದಲ್ಲಿ ಶುದ್ಧ ನೀರಿನ ಯಂತ್ರವನ್ನು ಅಳವಡಿಸಲಾಗಿದೆ ಆದರೂ ಅದು ಕೆಟ್ಟು ವರ್ಷಗಳೇ ಕಳೆದರೂ ರಿಪೇರಿ ಮಾಡಿಸುವ ಗೋಜಿಗೆ ಯಾರು ಹೋಗಿಲ್ಲ. ಈ ಬೇಸಿಗೆ ಬಿಸಿಲಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಜನ ಹಣವಿದ್ದವರು ಬಾಟಲಿ ನೀರು ಪಡೆಯುತ್ತಾರೆ, ಹಣ ವಿಲ್ಲದವರು ಬಾಯಾರಿಕೆಯಿಂದ ಬಳಲಿ ಸಾರಿಗೆ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಪ ಹಾಕಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಪಘಾತವಾದರೆ ಯಾರು ಜವಾಬ್ದಾರರು?
ಬೈಕ್‌ಗಳನ್ನು ನಿಲ್ಲಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ನಿಲ್ದಾಣದ ಮುಂಭಾಗಕ್ಕೆ ಕಬ್ಬಿಣದ ಕಂಬಿಗಳನ್ನು ನೆಟ್ಟು ವಿಕಲಚೇತನರು, ವೃದ್ಧರು ನರಕಯಾತನೆ ಅನುಭವಿಸುತ್ತಾ ಬಸ್ ನಿಲ್ದಾಣ ಪ್ರವೇಶಿಸುವಂತೆ ಮಾಡಿದ್ದಾರೆ. ಈ ಹಿಂದೆ ಪಾರ್ಕಿಂಗ್ ವ್ಯವಸ್ಥೆಗಾಗಿ ಇದ್ದ ಜಾಗವನ್ನುಹೋಟೆಲ್‌ಗೆ ಬಂದು ಹೋಗುವ ಗ್ರಾಹಕರಿಗಾಗಿ ಮೀಸಲಿಟ್ಟಿದ್ದಾರೆ. ಇಷ್ಟು ಸಾಲದೆಂಬಂತೆ ಕಿರಿದಾದ ಬಸ್ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳ ನಿಲುಗಡೆಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸಜ್ಜುಗೊಳಿಸುತ್ತಿದ್ದಾರೆ, ಬಸ್ ನಿಲ್ದಾಣದೊಳಗೆ ವಾಹನಗಳ ಪಾರ್ಕಿಂಗ್ ಎಲ್ಲಿಯಾದರೂ ಇದೆಯೇ? ಕುಟುಂಬದೊಂದಿಗೆ ಬರುವ ಸವಾರರು ಮಕ್ಕಳನ್ನು ಇಳಿಸಿದಾಗ ಸಾರಿಗೆ ಬಸ್ಸುಗಳು ಬಂದರೆ ಅಪಘಾತವಾದರೆ ಜವಾಬ್ದಾರರು ಯಾರು. ಅವೈಜ್ಞಾನಿಕ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ನಿಲ್ದಾಣದಲ್ಲಿ ಸ್ಥಳದ ಅಭಾವ:
ಶ್ರೀ ಜೇನುಕಲ್ ಬೆಟ್ಟ ಧಾರ್ಮಿಕ ಕ್ಷೇತ್ರಕ್ಕೆ ಪ್ರತಿ ಸೋಮವಾರ ಮತ್ತು ಹುಣ್ಣಿಮೆಗಳoದು ಸಾವಿರಾರು ಭಕ್ತರು ಬರುತ್ತಾರೆ, ಅಂದು ವಿಶೇಷ ಬಸ್‌ಗಳನ್ನು ಬಿಡಲಾಗುತ್ತದೆ. ನಿಲ್ದಾಣ ನಿಯಂತ್ರಕರಿಗೆ ಅಂದು ಬಸ್‌ಗಳನ್ನು ನಿಯಂತ್ರಿಸುವುದೇ ಕಷ್ಟವಾಗುತ್ತದೆ. ಸ್ಥಳ ಅಭಾವ ಎದ್ದು ಕಾಣುತ್ತದೆ. ಮಾಲೇಕಲ್ ತಿರುಪತಿ ಹಾಗೂ ಇತರೆ ದೇವಾಲಯಗಳ ಜಾತ್ರಾ ಮಹೋತ್ಸವ ಸಮಯದಲ್ಲಿಯೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ, ಅಲ್ಲದೆ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ನಿಲ್ದಾಣದೊಳಗೆ ಮತ್ತೊಂದು ನಿಲ್ದಾಣ ಮಾಡಲು ಹೊರಟಿರುವ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಣ ಗಳಿಕೆಯತ್ತ ಮಾತ್ರ ತಮ್ಮ ದೃಷ್ಟಿ ಇಟ್ಟಿದ್ದಾರೆ ಎನಿಸುತ್ತದೆ.ಅಗತ್ಯ ಲೈಟ್ಸ್ ಇಲ್ಲ:
ವಿದ್ಯುತ್ ನಿಲುಗಡೆಯಾದರೆ ಕತ್ತಲೆಯಲ್ಲಿ ಕಾರ್ಮೋಡದಂತಾಗಿ ಬಸ್ ನಿಲ್ದಾಣದಲ್ಲಿ ಭಯದ ವಾತಾವರಣ ಮೂಡುತ್ತದೆ. ನಾಲ್ಕಾರು ಎಮರ್ಜೆನ್ಸಿ ಲೈಟ್‌ಗಳನ್ನು ಅಳವಡಿಸಿ ಎಂದು ಮಾಧ್ಯಮದವರು ಎಷ್ಟೇ ಸಲಹೆ ನೀಡಿದರೂ ಕಿವಿಗೊಡದ ಅಧಿಕಾರಿಗಳು ಬೈಕ್ ಪಾರ್ಕಿಂಗ್‌ಗೆ ವಿಶೇಷ ಆಸಕ್ತಿ ತೋರಿಸುತ್ತಿರುವುದು ನಿಜಕ್ಕೂ ಪ್ರಯಾಣಿಕರಲ್ಲಿ ಶಂಕೆ ಮೂಡಿಸಿದೆ.ಈ ಹಿಂದೆ ಸಾರಿಗೆ ಸಚಿವರಾಗಿದ ಡಿ. ಸಿ.ತಮ್ಮಯ್ಯ ನಿಲ್ದಾಣದ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದ್ದು ಯಾವುದೇ ಸರ್ಕಾರವಿರಲ್ಲಿ ಅದು ಜಾರಿಗೆ ಬಂದೆ ಬರುತ್ತದೆ ಎಂದು ಹೇಳಿದ್ದರು, ಅದು ಇನ್ನೂ ಆಗಿಲ್ಲ. ಇತ್ತೀಚಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಸಕ ಕೆ.ಎಂ. ಶಿವಲಿಂಗಗೌಡ ಅವರೊಡನೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲ್ದಾಣ ಕಿರಿದಾಗಿರುವುದರಿಂದ ಗ್ರಾಮೀಣ ಬಸ್ ನಿಲ್ದಾಣವನ್ನು ಪಕ್ಕದ ಪಶು ಆಸ್ಪತ್ರೆಗೆ ಬದಲಾಯಿಸಿ ಅರಸೀಕೆರೆ ಬಸ್ ನಿಲ್ದಾಣವನ್ನು ಬೆಂಗಳೂರು ನಿಲ್ದಾಣದಂತೆ ಸಂಪೂರ್ಣ ಆಧುನೀಕರಿಸಲಾಗುವುದು. ಅದಕ್ಕೆ ಈ ಬಜೆಟ್‌ನಲ್ಲಿ ಹಣ ಇಡಲಾಗುವುದು ಎಂದು ಹೇಳಿ ವರ್ಷಗಳೇ ಕಳೆದರೂ ಆ ಸಂಬಂಧ ಕಾಮಗಾರಿ ಆರಂಭವಾಗುವ ಯಾವುದೇ ಲಕ್ಷಣ ಕಂಡು ಬರುತಿಲ್ಲ. ಆದ್ದರಿಂದ ಈಗಿರುವ ನಿಲ್ದಾಣದಲ್ಲಿ ಆದರೂ ಕುಡಿಯುವ ನೀರು, ಉತ್ತಮ ಶೌಚಾಲಯ, ಈ ಹಿಂದೆ ಇದ್ದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಮೂಲಕ ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುವರೆ ಕಾದು ನೋಡಬೇಕು.
================ಫೋಟೋ: ನೀರಿನ ಯಂತ್ರಬಸ್ನಿಲ್ದಾಣದ ಫೋಟೋ